Site icon Vistara News

ಕೋನಸೀಮಾ ಜಿಲ್ಲೆಗೆ ಅಂಬೇಡ್ಕರ್‌ ಹೆಸರು; ಸಚಿವರ ಮನೆಗೆ ಬೆಂಕಿ ಹಚ್ಚಿ ಪ್ರತಿಭಟನೆ

Andhra Protest

ಹೈದರಾಬಾದ್‌: ಕೊನಸೀಮಾ ಜಿಲ್ಲೆಗೆ ಡಾ. ಬಿ.ಆರ್‌.ಅಂಬೇಡ್ಕರ್‌ ಕೋನಸೀಮಾ ಎಂದು ಮರುನಾಮಕರಣ ಮಾಡಿದ್ದನ್ನು ವಿರೋಧಿಸಿ ಆಂಧ್ರಪ್ರದೇಶದ ಅಮಲಾಪುರಂ ನಗರದಲ್ಲಿ ನಿನ್ನೆಯಿಂದ ಪ್ರತಿಭಟನೆ ನಡೆಯುತ್ತಿದ್ದು(Protests in Andhra Pradesh), ಅದು ಹಿಂಸಾಚಾರ ಸ್ವರೂಪಕ್ಕೆ ತಿರುಗಿದೆ. ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು, ಆಡಳಿತ ಪಕ್ಷ ವೈಎಸ್‌ಆರ್‌ಸಿಪಿಯ ಮುಮ್ಮಿಡಿವರಮ್‌ ಶಾಸಕ ಪಿ.ಸತೀಶ್‌ ಮತ್ತು ಸಾರಿಗೆ ಸಚಿವ ಪಿ.ವಿಶ್ವರೂಪ್‌ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ವಿಶ್ವರೂಪ್‌ ಮನೆಯ ಆವರಣದಲ್ಲಿ ಇಡಲಾಗಿದ್ದ ವಸ್ತುಗಳಿಗೆಲ್ಲ ಬೆಂಕಿ ಹಾಕಿದ್ದಾರೆ. ಪೊಲೀಸ್‌ ವಾಹನಗಳಿಗೆ, ಶಾಲಾ-ಕಾಲೇಜುಗಳ ಬಸ್‌ಗಳಿಗೂ ಬೆಂಕಿ ಹಚ್ಚಿದ್ದಾರೆ. ಪೊಲೀಸರೆಡೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 20ಕ್ಕೂ ಪೊಲೀಸರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಹೆಚ್ಚುವರಿ 13 ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲಿ ಪೂರ್ವ ಗೋಧಾವರಿ ಜಿಲ್ಲೆಯನ್ನು ವಿಭಜಿಸಿ ಮಾಡಿದ್ದು ಕೋನಸೀಮಾ ಜಿಲ್ಲೆ. ಈ ಜಿಲ್ಲೆಗೆ ಇತ್ತೀಚೆಗೆ ವೈ.ಎಸ್‌.ಜಗನ್‌ ರೆಡ್ಡಿ ಸರ್ಕಾರ ಡಾ. ಬಿ.ಆರ್‌.ಅಂಬೇಡ್ಕರ್‌ ಕೋನಸೀಮಾ ಎಂದು ಮರುನಾಮಕರಣ ಮಾಡಿತ್ತು. ಈ ಜಿಲ್ಲೆಯಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದವರೇ ಜಾಸ್ತಿ ಇದ್ದಿದ್ದರಿಂದ ಸರ್ಕಾರ ಹೀಗೆ ಹೆಸರು ನೀಡಿತ್ತು. ಇಲ್ಲಿನ ಅಮಲಾಪುರಂ ಕೂಡ ಎಸ್‌ಸಿ ಮೀಸಲಾತಿ ಇರುವ ಲೋಕಸಭಾ ಕ್ಷೇತ್ರ. ಆದರೆ ಕೋನಸೀಮಾ ಎಂಬುದು ಆಗಿನಿಂದಲೂ ಇದ್ದ ಹೆಸರು. ಅದನ್ನು ಬದಲಿಸಬಾರದು ಎಂಬುದು ಇಲ್ಲಿನವರ ಆಗ್ರಹವಾಗಿದೆ.

ಇದನ್ನೂ ಓದಿ: Cyclone Asani | ಪಥ ಬದಲಿಸುತ್ತಿದೆ ಚಂಡಮಾರುತ: ಆಂಧ್ರ ಪ್ರದೇಶದಲ್ಲಿ ರೆಡ್‌ ಅಲರ್ಟ್‌

ಹಿಂಸಾಚಾರ ಭುಗಿಲೆದ್ದಿರುವ ಅಮಲಾಪುರಂನಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಇಲ್ಲಿ ಐದು ಜನಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ. 500 ಮಂದಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಮಧ್ಯೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಂಧ್ರಪ್ರದೇಶ ಗೃಹ ಸಚಿವೆ ತಾನೇತಿ ವನಿತಾ, ಡಾ. ಅಂಬೇಡ್ಕರ್‌ ನಾಮಕರಣ ಮಾಡಿದ್ದಕ್ಕೆ ಹೆಮ್ಮೆ ಪಡಬೇಕು. ಅದನ್ನ ಬಿಟ್ಟು ಸಮಾಜ ಘಾತುಕ ಶಕ್ತಿಗಳೆಲ್ಲ ಸೇರಿ ಹಿಂಸಾಚಾರ ನಡೆಸುತ್ತಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಕ್ಕಿದ್ದೇ ಅವಕಾಶವೆಂದು ಕೆಲವು ರಾಜಕೀಯ ಪಕ್ಷಗಳೂ ಕೂಡ ಪ್ರತಿಭಟನಾಕಾರರನ್ನು ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video | ಆಂಧ್ರಪ್ರದೇಶ ಸಾಗರ ತೀರದಲ್ಲಿ ಅಬ್ಬರದ ಅಲೆಗಳೊಂದಿಗೆ ತೇಲುತ್ತ ಬಂತೊಂದು ಚಿನ್ನದ ಬಣ್ಣದ ರಥ !

Exit mobile version