ಮುಂಬೈ, ಮಹಾರಾಷ್ಟ್ರ: ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಗಾಂಧಿ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ, ಸಾವರ್ಕರ್(VD Savarkar) ಅವರ ಮೊಮ್ಮಗ ರಂಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬ್ರಿಟಿಷರಿಗೆ ಸಾವರ್ಕರ್ ಕ್ಷಮೆ ಕೋರಿದ್ದರು ಎಂಬುದಕ್ಕೆ ಸಾಕ್ಷ್ಯ ತೋರಿಸುವಂತೆ ಸವಾಲು ಹಾಕಿದ್ದಾರೆ.
ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಶಿವಸೇನೆ, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ, ರಾಹುಲ್ ಗಾಂಧಿ ಅವರು ಸಾವರ್ಕರ್ ಬಗ್ಗೆ ಹೇಳಿದ ಮಾತಿಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ರಾಹುಲ್ ನೀಡುವ ಹೇಳಿಕೆಗಳು ಬಾಲಿಶ ಎಂದು ಹೇಳಿರುವ ರಂಜಿತ್, ರಾಹುಲ್ ಗಾಂಧಿ ಅವರು ತಾವು ಸಾವರ್ಕರ್ ಅಲ್ಲ. ಹಾಗಾಗಿ ಕ್ಷಮೆಯಾಚಿಸುವುದಿಲ್ಲ ಎಂದಿದ್ದಾರೆ. ಹಾಗಿದ್ದರೆ, ಸಾವರ್ಕರ್ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ತೋರಿಸಲು ನಾನು ಅವರಿಗೆ ಸವಾಲು ಹಾಕುತ್ತೇನೆ ಎಂದು ಹೇಳಿದ್ದಾರೆ. ರಾಜಕೀಯಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬಳಸಿಕೊಳ್ಳುವುದು ತಪ್ಪು. ರಾಹುಲ್ ಗಾಂಧಿ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.