Site icon Vistara News

Electoral Bonds: ಚುನಾವಣಾ ಬಾಂಡ್ ಮೂಲ ತಿಳಿಯುವ ಹಕ್ಕು ಜನರಿಗಿಲ್ಲ ಎಂದ ಕೇಂದ್ರ ಸರ್ಕಾರ

Money

cash

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಆರಂಭಿಸುವ ಮೊದಲೇ ಸುಪ್ರೀಂ ಕೋರ್ಟ್‌ಗೆ (Supreme Court) ಕೇಂದ್ರ ಸರ್ಕಾರ (Central Government) ಮಹತ್ವದ ಸ್ಪಷ್ಟನೆ ನೀಡಿದೆ. “ಚುನಾವಣಾ ಬಾಂಡ್‌ಗಳ ಮೂಲಗಳನ್ನು (Electoral Bonds) ಅರಿಯುವ ಮೂಲಭೂತ ಹಕ್ಕು ದೇಶದ ಜನರಿಗಿಲ್ಲ” ಎಂದು ಅಟಾರ್ನಿ ಜನರಲ್‌ ಆರ್.ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದಾರೆ.

“ದೇಶದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ ಕುರಿತು ತಿಳಿಯುವುದು ಜನರಿಗೆ ಮೂಲಭೂತ ಹಕ್ಕಾಗಿಲ್ಲ. ಸಂವಿಧಾನದ 19 (1) (A) ಅನ್ವಯ ಮಾಹಿತಿ ಪಡೆಯಲು ಆಗುವುದಿಲ್ಲ. ವಿಶೇಷ ಪ್ರಕರಣಗಳು, ವಿಶೇಷ ಮಾಹಿತಿಯನ್ನು ದೇಶದ ಜನರು ಪಡೆಯಬಹುದು. ಆದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ಒದಗಿಸುವ ಚುನಾವಣಾ ಬಾಂಡ್‌ಗಳ ಕುರಿತು ತಿಳಿಯುವುದು ಜನರಿಗೆ ಮೂಲಭೂತ ಹಕ್ಕಲ್ಲ” ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

Supreme Court

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್‌ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್‌ 10ರಂದು ಅರ್ಜಿಗಳನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಅಕ್ಟೋಬರ್‌ 31 ಹಾಗೂ ನವೆಂಬರ್‌ 1ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಈಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠವು, ಸಾಂವಿಧಾನಿಕ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿದೆ. ಅಕ್ಟೋಬರ್‌ 31ರಂದು ಅರ್ಜಿಗಳ ವಿಚಾರಣೆ ನಡೆಯಲಿದೆ.

ಏನಿದು ಚುನಾವಣಾ ಬಾಂಡ್‌ ಯೋಜನೆ?

ಚುನಾವಣಾ ಬಾಂಡ್‌ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಲಾಯಿತು.

ಇದನ್ನೂ ಓದಿ: 2020-21ರಲ್ಲಿ ಪಕ್ಷಗಳಿಗೆ ದೇಣಿಗೆ 41.5% ಇಳಿಕೆ, ಬಿಜೆಪಿಗೆ 477, ಕಾಂಗ್ರೆಸ್‌ಗೆ 74 ಕೋಟಿ ರೂ. ಸಂದಾಯ

ಚುನಾವಣಾ ಬಾಂಡ್‌ ಯೋಜನೆ ಅಡಿಯಲ್ಲಿ ಭಾರತದ ನಾಗರಿಕ ಅಥವಾ ಭಾರತದಲ್ಲಿ ನೋಂದಣಿಯಾದ ಕಂಪನಿಯು ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬಾಂಡ್‌ಗಳನ್ನು ಖರೀದಿಸುವ ಮೂಲಕ ದೇಣಿಗೆ ನೀಡಬಹುದಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನ (SBI) ಆಯ್ದ ಶಾಖೆಗಳಲ್ಲಿ 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್‌ ಖರೀದಿಸಿ ದೇಣಿಗೆ ನೀಡಬಹುದಾಗಿದೆ. ಇಲ್ಲಿ ದೇಣಿಗೆ ನೀಡಿದವರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗುವುದಿಲ್ಲ. ಹಾಗೆಯೇ, ಇಷ್ಟು ಮೊತ್ತದ ದೇಣಿಗೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ, ಯೋಜನೆಯು ವಿವಾದಕ್ಕೆ ಗುರಿಯಾಗಿದ್ದು, ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

Exit mobile version