ಪುದುಚೇರಿ: ಪುದುಚೇರಿ ಕಾಂಗ್ರೆಸ್‌ನ ಉಸ್ತುವಾರಿಯಾಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಮುತ್ತಿಗೆ ಹಾಕಿ, ಅವರ ವಾಹವನ್ನು ಜಖಂಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಮಾಜಿ ಸಚಿವರೊಬ್ಬರನ್ನ ಬೆಂಬಲಿಸುವ ಬಣ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್ ಸಭೆ ಮುಗಿಸಿ ಹೊರ ಬರುತ್ತಿದ್ದಂತೆಯೇ ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿದ್ದ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಿದರು.
ಈ ಕೂಡಲೇ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ಕಾರ್ಯಕರ್ತರು, ತಳ್ಳಾಟ-ನೂಕಾಟ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ಕಾರನ್ನು ಏರಲು ಅವಕಾಶ ನೀಡದೆ ಅವರಿಗೆ ಮುತ್ತಿಗೆ ಹಾಕಿದ್ದಾರೆ. ಅವರು ಕಾರಿನ ಬಳಿ ಬರುತ್ತಿದ್ದಂತೆಯೇ ಕಾರನ್ನು ಜಖಂಗೊಳಿಸಲಾಗಿದೆ. ಆದರೆ ದಿನೇಶ್ ಗುಂಡೂರಾವ್ ಈ ಸಂದರ್ಭದಲ್ಲಿ ಯಾವುದೇ ಹೇಳಿಕೆ ನೀಡದೆ, ಸ್ಥಳದಿಂದ ತೆರಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾರ್ಯಕರ್ತರನ್ನು ಪಕ್ಷದಿಂದ ಆಮಾನತುಗೊಳಿಸಿ ಪಿಸಿಪಿ ಅಧ್ಯಕ್ಷ ಸುಬ್ರಮಣ್ಯನ್ ಆದೇಶ ಹೊರಡಿಸಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಅವರ ಬೆಂಬಲಿಗರೂ ಇದ್ದರು. ಅವರೂ ನಾರಾಯಣಸ್ವಾಮಿಯ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ.