ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು 50ನೇ ವಯಸ್ಸಿನಲ್ಲಿ ಮತ್ತೊಮ್ಮೆ ತಂದೆಯಾಗಿದ್ದಾರೆ. ಭಗವಂತ್ ಮಾನ್ ಹಾಗೂ ಡಾ.ಗುರುಪ್ರೀತ್ ಕೌರ್ (Dr. Gurpreet Kaur) ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಭಗವಂತ್ ಮಾನ್ ಅವರು ಈ ಸಂತಸವನ್ನು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಹೆಣ್ಣುಮಗು ಜನಿಸಿದೆ” ಎಂಬುದಾಗಿ ಅವರು ಪೋಸ್ಟ್ ಮಾಡಿದ್ದು, ಸಾವಿರಾರು ಜನ ಪಂಜಾಬ್ ಮುಖ್ಯಮಂತ್ರಿಗೆ (Punjab CM) ಅಭಿನಂದನೆ ಸಲ್ಲಿಸಿದ್ದಾರೆ.
“ದೇವರು ನನಗೆ ಮಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ತಾಯಿ ಹಾಗೂ ಮಗಳು ಆರೋಗ್ಯದಿಂದ ಇದ್ದಾರೆ” ಎಂಬುದಾಗಿ ಭಗವಂತ್ ಮಾನ್ ಪೋಸ್ಟ್ ಮಾಡಿದ್ದಾರೆ. ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ ಎಂದು ತಿಳಿದುಬಂದಿದೆ. ಗುರುಪ್ರೀತ್ ಕೌರ್ ಅವರನ್ನು ಬುಧವಾರ (ಮಾರ್ಚ್ 27) ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ (ಮಾರ್ಚ್ 28) ಬೆಳಗ್ಗೆ ಹೆರಿಗೆಯಾಗಿದೆ.
Blessed with baby Girl.. pic.twitter.com/adzmlIxEbb
— Bhagwant Mann (@BhagwantMann) March 28, 2024
2 ವರ್ಷದ ಹಿಂದೆ ಮದುವೆ
ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಭಗವಂತ್ ಮಾನ್ ಅವರು ಎರಡನೇ ಮದುವೆಯಾಗಿದ್ದರು. ಡಾ.ಗುರುಪ್ರೀತ್ ಕೌರ್ ಹಾಗೂ ಭಗವಂತ್ ಮಾನ್ ಅವರ ಮದುವೆಯು 2022ರ ಜುಲೈ 7ರಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅತ್ಯಂತ ಆತ್ಮೀಯರ ಉಪಸ್ಥಿತಿಯಲ್ಲಿ ಸರಳವಾಗಿ ನೆರವೇರಿತ್ತು. ಗುರುಪ್ರೀತ್ ಕೌರ್ ಅವರು ಮೂಲತಃ ಹರಿಯಾಣದ ಕುರುಕ್ಷೇತ್ರದ ಪಿಹೋವಾ ಗ್ರಾಮದವರು. ಪ್ರಸಕ್ತ ಪಂಜಾಬ್‌ನ ರಾಜಪುರದಲ್ಲಿ ನೆಲೆಸಿದ್ದಾರೆ. ಕೃಷಿ ಹಿನ್ನೆಲೆಯ ಕುಟುಂಬದ ಮೂರನೇ ಮಗಳು ಈಕೆ. ಇಡೀ ಕುಟುಂಬವೇ ಈ ಹರಿಯಾಣದಿಂದ ರಾಜಪುರಕ್ಕೆ ಶಿಫ್ಟ್ ಆಗಿದೆ.
ಇದನ್ನೂ ಓದಿ: 51ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ!
ಭಗವಂತ್ ಮಾನ್ ಮೊದಲನೇ ಪತ್ನಿ ಇಂದ್ರಪ್ರೀತ್ ಕೌರ್ ಅಮೆರಿಕದಲ್ಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳು ಭಗವಂತ್ ಮಾನ್ ಪಂಜಾಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 23 ವರ್ಷ ಮಗಳು ಸೀರತ್ ಕೌರ್ ಮಾನ್ ಮತ್ತು 17 ವರ್ಷದ ಮಗ ದಿಲ್ಶಾನ್ ಸಿಂಗ್ ಮಾನ್. ಇಬ್ಬರೂ ಅಮೆರಿಕದಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಗವಂತ್ ಮಾನ್ ಅವರ ಮೊದಲ ಪುತ್ರಿಯು ತಂದೆಯ ವಿರುದ್ಧವೇ ಹಲವು ಆರೋಪಗಳನ್ನು ಮಾಡಿದ್ದರು. ಆ ವಿಡಿಯೊ ಭಾರಿ ವೈರಲ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ