Site icon Vistara News

ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ ಅಮರಿಂದರ್​ ಸಿಂಗ್​ ಪಕ್ಷ; ಮಕ್ಕಳು, ಮೊಮ್ಮಗನೂ ಕಮಲ ಪಾಳಯಕ್ಕೆ

Captain Amarinder

ಚಂಡಿಗಢ್​: ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ತಮ್ಮ ಪಂಜಾಬ್​ ಲೋಕ್​ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ. ಸೆಪ್ಟೆಂಬರ್​ 19ರಂದು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಪಿಎಲ್​​ಸಿ ಪಕ್ಷ ಬಿಜೆಪಿಯೊಟ್ಟಿಗೆ ಕೂಡಿಕೊಳ್ಳಲಿದೆ. ಅದಾದ ಬಳಿಕ ಕ್ಯಾಪ್ಟನ್​ ಅಮರಿಂದರ್ ಸಿಂಗ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಈ ಪಕ್ಷದಲ್ಲಿದ್ದ ಮಾಜಿ ಶಾಸಕರ ಜತೆ, ಅಮರಿಂದರ್ ಸಿಂಗ್​ರ ಮಗಳು ಜೈ ಇಂದರ್​ ಕೌರ್​, ಪುತ್ರ ರಾಣಿಂದರ್​ ಸಿಂಗ್​, ಮೊಮ್ಮಗ ನಿರ್ವಾನ್ ಸಿಂಗ್​ ಅವರೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಅವರ ಪತ್ನಿ, ಸಂಸದೆ ಪ್ರಣೀತ್ ಕೌರ್​ ಕಾಂಗ್ರೆಸ್​​ನಲ್ಲಿಯೇ ಉಳಿಯಲಿದ್ದಾರೆ.

ಸೆಪ್ಟೆಂಬರ್​ 19ಕ್ಕೆ ವಿಲೀನ ಪ್ರಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಅದೇ ದಿನ ಪಂಜಾಬ್​ ಲೋಕ್​ ಕಾಂಗ್ರೆಸ್ ಕಾರ್ಯಕರ್ತರು ಪಟಿಯಾಲಾದಲ್ಲಿ ಬಿಜೆಪಿ ಸೇರ್ಪಡೆಯಾಗುವರು ಎಂದು ಅಮರಿಂದರ್ ಸಿಂಗ್​ ಆಪ್ತ ಕೆ.ಕೆ.ಶರ್ಮಾ ಮಾಹಿತಿ ನೀಡಿದ್ದಾರೆ. ಪಂಜಾಬ್​ ವಿಧಾನಸಭೆ ಚುನಾವಣೆಗೂ ಪೂರ್ವ ಪಂಜಾಬ್​​ನಲ್ಲಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಕಾಂಗ್ರೆಸ್​ ಮೇಲೆ ಬೇಸರಗೊಂಡು ಪಕ್ಷವನ್ನು ತೊರೆದಿದ್ದರು. ಅಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್​ ಸಿಧು ಮತ್ತು ಅಮರಿಂದರ್​ ಸಿಂಗ್​ ನಡುವಿನ ಗಲಾಟೆಯಲ್ಲಿ ಅಮರಿಂದರ್ ಸಿಂಗ್​​ರನ್ನೇ ಮೂಲೆಗುಂಪು ಮಾಡಿದ್ದರು ಕಾಂಗ್ರೆಸ್ ವರಿಷ್ಠರು. ಇದೇ ಬೇಸರದಲ್ಲೇ ಅವರು ಪಕ್ಷಕ್ಕೆ ಗುಡ್​ ಬೈ ಹೇಳಿದ್ದರು.

ಅಮರಿಂದರ್​ ಸಿಂಗ್ ಕಾಂಗ್ರೆಸ್​ ಬಿಟ್ಟಾಗಿನಿಂದಲೂ ಅವರು ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಪಂಜಾಬ ಲೋಕ್​ ಕಾಂಗ್ರೆಸ್ ಪಕ್ಷ ರಚನೆ ಮಾಡಿದ್ದರು. ಅಷ್ಟಾದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡೇ ಸ್ಪರ್ಧಿಸಿದ್ದರು. ಇತ್ತೀಚೆಗೆ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಿದ್ದ ಅಮರಿಂದರ್​ ಸಿಂಗ್​ ವಾಪಸ್​ ಬರುತ್ತಿದ್ದಂತೆ ಅವರ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ ಎಂದು ಹೇಳಲಾಗಿತ್ತು. ಅದರಂತೆ ಸೆಪ್ಟೆಂಬರ್​ 19ರಂದು ಪಿಎಲ್​ಸಿ ಪಕ್ಷ ಬಿಜೆಪಿಯೊಟ್ಟಿಗೆ ವಿಲೀನಗೊಳ್ಳಲಿದೆ.

ಇದನ್ನೂ ಓದಿ: ಲಂಡನ್‌ನಲ್ಲಿ ಸರ್ಜರಿಗೆ ಒಳಗಾದ ಕ್ಯಾ. ಅಮರಿಂದರ್‌ ಸಿಂಗ್‌; ವಾಪಸ್‌ ಬರುತ್ತಿದ್ದಂತೆ ಬಿಜೆಪಿ ಸೇರ್ಪಡೆ

Exit mobile version