ಚಂಡಿಗಢ ಪಂಜಾಬ್‌ನಲ್ಲಿ 424 ವಿಐಪಿಗಳ ಭದ್ರತೆ ಹಿಂಪಡೆದಿದ್ದ ಅಲ್ಲಿನ ಆಪ್ ಸರ್ಕಾರ, ಮತ್ತೆ ಅವರಿಗೆ ಭದ್ರತೆ ಒದಗಿಸಲು ನಿರ್ಧಾರ ಮಾಡಿದೆ. ಪಂಜಾಬ್‌ನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾರಿಗೆ ನೀಡಲಾಗಿದ್ದ ಭದ್ರತೆ ವಾಪಸ್ ಪಡೆಯುತ್ತಿದ್ದಂತೆ ಅವರ ಹತ್ಯೆಯಾಗಿತ್ತು. ಅದರ ಬೆನ್ನಲ್ಲೇ ಸರ್ಕಾರ ಈ ತೀರ್ಮಾನ ಮಾಡಿದೆ. ಪಂಜಾಬ್‌ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ನಾಯಕರು ಮತ್ತು ರಾಜಕೀಯ ನಾಯಕರ ಭದ್ರತೆಯನ್ನು ವಾಪಸ್ ಪಡೆದಿತ್ತು. ಕೆಲವರ ಭದ್ರತೆ ಪ್ರಮಾಣ ಕಡಿಮೆ ಮಾಡಿತ್ತು.
ಹೀಗೆ ಭದ್ರತೆಯನ್ನು ಕಳೆದುಕೊಂಡವರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ನಾಯಕ, ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ನನಗೆ ನೀಡಲಾಗಿದ್ದ ರಕ್ಷಣೆಯನ್ನು ಆಪ್ ಸರ್ಕಾರ ಹಿಂಪಡೆಯಲು ಕಾರಣವೇನು ಎಂಬುದು ಗೊತ್ತಾಗಬೇಕು ಎಂದು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ʼಪ್ರಮುಖರಿಗೆ ನೀಡಲಾಗಿದ್ದ ಭದ್ರತೆಯನ್ನು ಯಾವ ಆಧಾರದ ಮೇಲೆ ಹಿಂಪಡೆದಿದ್ದೀರಿ ಮತ್ತು ಅವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದು ಯಾಕೆʼ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು. ಹಾಗೇ, ವಿವರವನ್ನು ಮುಚ್ಚಿದ ಕವರ್‌ನಲ್ಲಿ ಹಾಕಿ ಜೂ.2ರ ಒಳಗೆ ಕೋರ್ಟ್ ಸಲ್ಲಿಸಿ ಎಂದು ಸೂಚಿಸಿತ್ತು. ಇಂದು ಹೈಕೋರ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಆಪ್ ಸರ್ಕಾರ, ಎಲ್ಲ 424 ಜನರಿಗೆ ಮತ್ತೆ ಜೂನ್ 7ರಿಂದ ಭದ್ರತೆ ನೀಡುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್, AK-47ಕ್ಕಿಂತ ಅಪಾಯಕಾರಿ
424 ಜನರ ಭದ್ರತೆಯನ್ನು ವಾಪಸ್ ಪಡೆದ ಬೆನ್ನಲ್ಲೇ ಇಡೀ ರಾಜಕೀಯ ವಲಯ ಪಂಜಾಬ್ ಸರ್ಕಾರವನ್ನು ಟೀಕಿಸಿತ್ತು. ಅದರಲ್ಲೂ 28 ವರ್ಷದ ಕಿರಿಯ ಗಾಯಕ ಮೂಸೇವಾಲಾ ಹತ್ಯೆಯ ಬಳಿಕವಂತೂ ಈ ವಿಚಾರದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಇಲ್ಲಿ ಅನೇಕರಿಗೆ ಜೀವ ಬೆದರಿಕೆ ಇದೆ. ಅಂಥವರ ಭದ್ರತೆಯನ್ನೆಲ್ಲ ವಾಪಸ್ ಪಡೆಯಲಾಗಿದೆ. ಆಪ್ ಸರ್ಕಾರ ಇದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಇದನ್ನೂ ಓದಿ: 1% ಕಮಿಷನ್ ಬೇಡಿಕೆ ಸಾಬೀತು, ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅರೆಸ್ಟ್!