ಫರೀದ್‌ಕೋಟ್: ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ಗುರು ಗೋಬಿಂದ್ ಸಿಂಗ್ ಮೆಡಿಕಲ್ ಕಾಲೇಜಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ, ರೋಗಿಗಳು ಮಲಗುವ ಹಾಸಿಗೆ ಸೇರಿ, ಇನ್ನಿತರ ಮೂಲಸೌಕರ್ಯಗಳನ್ನು ಪರಿಶೀಲನೆ ಮಾಡಿದರು. ಈ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್‌ಗಳ ಹಾಸಿಗೆಗಳು ಅನೈರ್ಮಲ್ಯವಾಗಿವೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಆದರೆ ಹೀಗೆ ಭೇಟಿ ಕೊಟ್ಟ ವೇಳೆ ಅವರೊಂದು ವಿವಾದ ಸೃಷ್ಟಿಸಿದ್ದಾರೆ. ಈ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಆಸ್ಪತ್ರೆ ಯೂನಿವರ್ಸಿಟಿಯ ಉಪ ಕುಲಪತಿ ಡಾ.ರಾಜ್ ಬಹದ್ದೂರ್ ಬಳಿ ಆಸ್ಪತ್ರೆಯ ರೋಗಿಗಳ ಬೆಡ್ ಮೇಲೆ ಮಲಗುವಂತೆ ಹೇಳಿದ್ದಾರೆ. ಆರೋಗ್ಯ ಸಚಿವರ ಕಠಿಣ ಆದೇಶವನ್ನು ಆ ಉಪ-ಕುಲಪತಿ ಪಾಲಿಸಿದ್ದಾರೆ.
ವೈದ್ಯಕೀಯ ಆಸ್ಪತ್ರೆಯಲ್ಲಿ ಬೆಡ್‌ಗಳು ಸ್ವಚ್ಛವಾಗಿಲ್ಲ ಎಂಬ ಕಾರಣಕ್ಕೆ ಉಪ ಕುಲಪತಿಗೆ ಅದರ ಮೇಲೆ ಮಲಗುವ ಶಿಕ್ಷೆಯನ್ನು ಆರೋಗ್ಯ ಸಚಿವರು ನೀಡಿದ್ದಾರೆ. ಉಪಕುಲಪತಿ ಹಾಸಿಗೆ ಮೇಲೆ ಮಲಗಿರುವ ಫೋಟೋ, ವಿಡಿಯೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಪಂಜಾಬ್ ಪ್ರತಿಪಕ್ಷಗಳು, ಪಂಜಾಬ್ ನಾಗರಿಕ ವೈದ್ಯಕೀಯ ಸೇವಾ ಸಂಘ ಇದನ್ನು ಖಂಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ನೋಡಿದ ಅನೇಕರು ವಿರೋಧಿಸಿದ್ದಾರೆ. ಆರೋಗ್ಯ ಸಚಿವರ ಈ ಕಠಿಣ ವರ್ತನೆಯಿಂದ ಬೇಸತ್ತ ಉಪ ಕುಲಪತಿ ಇದೀಗ ರಾಜೀನಾಮೆ ನೀಡಿದ್ದಾರೆ ಎಂದೂ ಹೇಳಲಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪಂಜಾಬ್ ನಾಗರಿಕ ವೈದ್ಯಕೀಯ ಸೇವಾ ಸಂಘದ ಡಾ. ಅಖಿಲ್ ಸರಿನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ʼಯೂನಿರ್ವಸಿಟಿಯ ಉಪಕುಲಪತಿಯನ್ನು, ಪಂಜಾಬ್ ಆರೋಗ್ಯ ಸಚಿವರು ತುಂಬ ಅವಮರ್ಯಾದೆಯಿಂದ ನಡೆಸಿಕೊಂಡಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಿರಿಯ ಆರೋಗ್ಯ ಕಾರ್ಯನಿವರ್ಹಣಾಧಿಕಾರಿಗೆ ಇಷ್ಟು ಅಗೌರವ ಒಳ್ಳೆಯದಲ್ಲ. ಇವರು ಈ ರಾಜ್ಯದಲ್ಲಿರುವ ಏಕೈಕ ಬೆನ್ನಮೂಳೆ ಸರ್ಜನ್ ಆಗಿದ್ದರು. ಅವರೀಗ ನೋವಿನಿಂದ ತಮ್ಮ ಹುದ್ದೆಗೇ ರಾಜೀನಾಮೆ ಕೊಟ್ಟಿದ್ದಾರೆʼ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಕುಮಾರ್ ಬನ್ಸಾಲ್ ಟ್ವೀಟ್ ಮಾಡಿ, ʼ ಡಾ. ರಾಜ್ ಬಹದ್ದೂರ್ ಅವರು ಬಾಬಾ ಫರೀದ್ ಯೂನಿವರ್ಸಿಟಿಯ ಉಪಕುಲಪತಿಯಷ್ಟೇ ಅಲ್ಲ, ಅತ್ಯುತ್ತಮ ಸರ್ಜನ್. ಅವರ ವಿಚಾರದಲ್ಲಿ ಪಂಜಾಬ್ ಆಪ್ ಸಚಿವ ವರ್ತಿಸಿದ ರೀತಿ ನಾಚಿಕೆಗೇಡು. ಉಪ ಕುಲಪತಿಯಾದವರು ಕುಲಪತಿಗೆ ಉತ್ತರದಾಯಿಯೇ ಹೊತರು, ಸಚಿವರಿಗಲ್ಲ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ನಾಯಕ ಪ್ರಗತ್ ಸಿಂಗ್ ಕೂಡ ವಿಡಿಯೋ ಶೇರ್ ಮಾಡಿಕೊಂಡು ಘಟನೆ ಖಂಡಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ತೀವ್ರ ಅನಾರೋಗ್ಯ; ದೆಹಲಿ ಆಸ್ಪತ್ರೆಗೆ ದಾಖಲು