ನವದೆಹಲಿ: ಇತ್ತೀಚೆಗೆ ಭಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ಕಾಳಗ ಸಂಬಂಧ ಪಂಜಾಬ್ ಪೊಲೀಸರು ಒಬ್ಬ ಸೈನಿಕನನ್ನು ಬಂಧಿಸಿದ್ದಾರೆ. ಈ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ಯೋಧರು ನಿದ್ರೆ ಮಾಡುತ್ತಿದ್ದಾಗ ಬಂಧಿತ ಸೈನಿಕ ಗುಂಡು ಹಾರಿಸಿದ್ದ. ಬಂಧಿತನನ್ನು ಆರ್ಮಿ ಗನ್ನರ್ ಮೋಹನ್ ದೇಸಾಯಿ ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಸೇನಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ(Bathinda Military Station Shooting).
ಮೋಹನ್ ದೇಸಾಯಿ ಗುಂಡಿಗೆ ಬಲಿಯಾದ ನಾಲ್ವರ ಯೋಧರನ್ನು ಸಾಗರ್, ಕಮಲೇಶ್, ಸಂತೋಷ್ ಹಾಗೂ ಯೋಗೇಶ್ ಎಂದು ಗುರುತಿಸಲಾಗಿದೆ. ಈ ಮೃತ ಯೋಧರ ಸೇನೆಯ ಆರ್ಟಿಲರಿ ಯುನಿಟ್‌ಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 12 ರಂದು ನಡೆದ ಈ ಘಟನೆಯು ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ವಿಶೇಷವಾಗಿ ಪ್ರತ್ಯೇಕತಾವಾದಿ ಸಿಖ್ ಬೋಧಕ ಅಮೃತಪಾಲ್ ಸಿಂಗ್ ಮತ್ತು ಅವರ ಸಂಘಟನೆಯಾದ ‘ವಾರಿಸ್ ಪಂಜಾಬ್ ಸೆ’ ವಿರುದ್ಧದ ಭಾರೀ ದಮನಕ್ಕೆ ಪ್ರತೀಕಾರದ ಊಹಾಪೋಹಗಳ ನಡುವೆಯೇ ಈ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಬಂಧಿತನಾಗಿರುವ ವ್ಯಕ್ತಿಗೂ ಹಾಗೂ ಖಲಿಸ್ತಾನಿ ನಾಯಕನಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 12ರ ಮುಂಜಾನೆ 4:30ಕ್ಕೆ ಗುಂಡಿನ ದಾಳಿ ನಡೆದಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಕುರ್ತಾ-ಪೈಜಾಮಾದಲ್ಲಿ ಕೆಲವು ಅಪರಿಚಿತ ಮುಸುಕುಧಾರಿಗಳು ಕಾಣಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್ ಹೊಂದಿದ್ದು, ಮತ್ತೊಬ್ಬ ಕೊಡಲಿಯನ್ನು ಹಿಡಿದುಕೊಂಡಿದ್ದು, ಅವರು ಸೇನಾ ಠಾಣೆಯ ಸಮೀಪವಿರುವ ಕಾಡಿನ ಕಡೆಗೆ ಓಡಿಹೋದರು. 20ರ ಹರೆಯದ ನಾಲ್ವರು ಯೋಧರು ತಮ್ಮ ಕೊಠಡಿಗಳಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಭಟಿಂಡಾ ಸೇನಾ ನೆಲೆಯಲ್ಲಿ ಏಪ್ರಿಲ್ 12ರಂದು ಏನಾಯ್ತು?
ಪಂಜಾಬ್ನ ಭಟಿಂಡಾ ಸೇನಾ ನೆಲೆಯಲ್ಲಿ ಏ.12ರಂದು ಮುಂಜಾನೆ ನಡೆದ ಫೈರಿಂಗ್ನಲ್ಲಿ ಮೃತಪಟ್ಟ ನಾಲ್ವರೂ ಸೇನಾ ಯೋಧರೇ (Bathinda Military Station Firing) ಎಂದು ಭಾರತೀಯ ಸೇನೆ ನೈಋತ್ಯ ಕಮಾಂಡ್ ಹೇಳಿಕೆ ಬಿಡುಗಡೆ ಮಾಡಿದೆ. ಬೆಳಗ್ಗೆ ಭಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರು ಉಗ್ರರು ಎಂದು ಮೊದಲು ವರದಿಯಾಗಿತ್ತು. ಸೇನಾ ನೆಲೆಗೆ ಭಯೋತ್ಪಾದಕರು ನುಗ್ಗಿದ್ದರು. ಹೀಗಾಗಿ ಸೇನಾ ಸಿಬ್ಬಂದಿ ಅವರ ಮೇಲೆ ಫೈರಿಂಗ್ ನಡೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅಪ್ಡೇಟ್ ಮಾಹಿತಿ ಬಂದಿದ್ದು, ಮೃತಪಟ್ಟವರು ಉಗ್ರರಲ್ಲ, ಸೇನಾ ಯೋಧರೇ ಎನ್ನಲಾಗಿದೆ.
ಮೃತಪಟ್ಟ ಸೈನಿಕರು ಫಿರಂಗಿ ದಳಕ್ಕೆ ಸೇರಿದ 80 ಮಧ್ಯಮ ರೆಜಿಮೆಂಟ್ಗೆ ಸೇರಿದವರಾಗಿದ್ದಾರೆ. ಮುಂಜಾನೆ 4.35ರ ಹೊತ್ತಿಗೆ ಮಿಲಿಟರಿ ಸ್ಟೇಶನ್ನಲ್ಲಿರುವ ಮೆಸ್ನಲ್ಲಿ ಈ ಗುಂಡಿನ ದಾಳಿ ನಡೆದಿತ್ತು. ಸಿವಿಲ್ ಡ್ರೆಸ್ನಲ್ಲಿ ಇದ್ದವನೊಬ್ಬ ಫೈರಿಂಗ್ ಮಾಡಿದ್ದಾನೆ. ಸದ್ಯ ಆ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಪಂಜಾಬ್ ಪೊಲೀಸ್ ಹಾಗೂ ಸೇನಾ ಸಿಬ್ಬಂದಿ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಇದು ಉಗ್ರ ದಾಳಿಯಲ್ಲ ಎಂಬುದಂತೂ ಖಚಿತವಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಟಿಂಡಾ ಸೇನಾ ನೆಲೆ ಮೇಲೆ ದಾಳಿ, ಇದು ಅಪಾಯದ ಕರೆಗಂಟೆ
‘ಈಗೆರಡು ದಿನಗಳ ಹಿಂದೆ ಈ ಸೇನಾ ನೆಲೆಯಿಂದ ಐಎನ್‌ಎಸ್‌ಎಎಸ್ ರೈಫಲ್ ಮತ್ತು 28 ಬುಲೆಟ್ಗಳು ಸೋಮವಾರ ನಾಪತ್ತೆಯಾಗಿದ್ದವು. ಈ ರೈಫಲ್ನಿಂದಲೇ ಗುಂಡಿನ ದಾಳಿ ನಡೆದಿದೆ ಎಂದೂ ಖಚಿತವಾಗಿದೆ. ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದರಿಂದ ಮಾಧ್ಯಮಗಳು ವರದಿ ಪ್ರಕಟಿಸುವಾಗ ಅಷ್ಟೇ ಸೂಕ್ಷ್ಮತೆಯಿಂದ ವರ್ತಿಸಬೇಕು. ಊಹಾಪೋಹದ ವರದಿಗಳನ್ನು ಪ್ರಕಟಿಸಬಾರದು’ ಎಂದೂ ಸೇನೆ ಮನವಿ ಮಾಡಿತ್ತು.