ಪಂಜಾಬ್ನ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ (42) ಅವರು ಆಸ್ಟ್ರೇಲಿಯಾದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿನ ಮೆಲ್ಬೋರ್ನ್ನಲ್ಲಿ ಮೂರು ವಾಹನಗಳ ನಡುವೆ ಉಂಟಾದ ಭೀಕರ ಅಪಘಾತಕ್ಕೆ ನಿರ್ವೈರ್ ಸಿಂಗ್ ಬಲಿಯಾಗಿದ್ದಾರೆ. ಆಸ್ಟ್ರೇಲಿಯಾದ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಡಿಗ್ಗರ್ಸ್ ರೆಸ್ಟ್ನ ಬುಲ್ಲಾ ಡಿಗ್ಗರ್ಸ್ ರೆಸ್ಟ್ ರೋಡ್ನಲ್ಲಿ ಮೂರು ವಾಹನಗಳ ಮಧ್ಯೆ ಡಿಕ್ಕಿಯುಂಟಾಗಿದೆ. ಕಿಯಾ ಕಾರೊಂದರ ಅತಿಯಾದ ವೇಗವೇ ಘಟನೆಗೆ ಕಾರಣವಾಗಿದ್ದು, ಅದರ ಚಾಲಕ 23 ವರ್ಷದ ಯುವಕ ಮತ್ತು ಒಬ್ಬಳು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರ್ವೈರ್ ಸಿಂಗ್ ಮೂಲತಃ ಪಂಜಾಬ್ನ ಕುರಾಲಿಯವರಾಗಿದ್ದು, ತನ್ನ ಗಾಯನ ವೃತ್ತಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಸಲುವಾಗಿ, ಹೆಚ್ಚಿನ ಅವಕಾಶ ಪಡೆಯಲು ಕಳೆದ 9 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಇಂದು ಅವರು ತಮ್ಮ ಕಚೇರಿಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತದ ಭೀಕರತೆ ಎಷ್ಟಿತ್ತು ಎಂದರೆ, ಡಿಕ್ಕಿಯ ರಭಸಕ್ಕೆ ನಿರ್ವೈರ್ ಸಿಂಗ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನಿರ್ವೈರ್ ಸಿಂಗ್ ಸಾವಿಗೆ ಪಂಜಾಬ್ನಲ್ಲಿರುವ ಅವರ ಅಭಿಮಾನಿಗಳು, ಮೆಲ್ಬೋರ್ನ್ನಲ್ಲಿರುವ ಭಾರತೀಯ ಸಮುದಾಯದವರು ಸೇರಿ ಅವರ ಅನೇಕಾನೇಕ ಫಾಲೋವರ್ಸ್ ಕಂಬನಿ ಮಿಡಿದಿದ್ದಾರೆ. ಇವರು ಮೈ ಟರ್ನ್ ಅಲ್ಬಮ್ನ ‘ತೇರೆ ಬಿನಾ’ (Tere Bina from the album My Turn) ಹಾಡಿನಿಂದ ಫುಲ್ ಫೇಮಸ್ ಆಗಿದ್ದರು. Darda a Dil, Je Russgi, Ferrari Dream and Hikk Thok Ke ಎಂಬಿತ್ಯಾದಿ ಹಿಟ್ ಹಾಡುಗಳನ್ನೂ ಇವರು ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಧು ಮೂಸೆ ವಾಲಾ ಹಂತಕರ ಎನ್‌ಕೌಂಟರ್; ಪಂಜಾಬ್ ಪೊಲೀಸರಿಂದ ಇಬ್ಬರ ಹತ್ಯೆ