ಬೆಂಗಳೂರು: ಕನ್ನಡ ಭವನ ನಿರ್ಮಿಸಲು ನಮ್ಮ ಸರ್ಕಾರಕ್ಕೆ ಭೂಮಿ ಕೇಳಬೇಡಿ. ನೀವೇ ಭೂಮಿ ಖರೀದಿಸಿ, ಕನ್ನಡ ಭವನವನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಗೋವಾ ಮುಖ್ಯಮಂತ್ರಿ (Goa CM) ಪ್ರಮೋದ್ ಸಾವಂತ್ ಅವರು ಗೋವಾ ಕನ್ನಡಿಗರಿಗೆ ಹೇಳಿದ್ದಾರೆ. ಅಖಿಲ ಗೋವಾ ಕನ್ನಡ ಸಂಘವು ನಾರ್ತ್ ಗೋವಾದ ಬಿಚೋಲಿನ್‌ನಲ್ಲಿ ಭಾನುವಾರ ಆಯೋಜಿಸಿದ್ದ 7ನೇ ಸಾಂಸ್ಕೃತಿಕ ಸಮಾವೇಶದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಮುಖ್ಯಮಂತ್ರಿಗಳ ಈ ಮಾತುಗಳಿಂದ ಗೋವಾ ಕನ್ನಡಿಗರು ತೀವ್ರ ನಿರಾಸೆಯನ್ನು ಹೊರ ಹಾಕಿದ್ದಾರೆ.
ನಿಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಜತೆ ಮಾತನಾಡಿದ್ದಾರೆ. ಕನ್ನಡ ಭವನ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗೋವಾ ಸರ್ಕಾರದ ಬಳಿ ಜಾಗ ಇಲ್ಲ. ಆದರೆ, ನೀವು ಭೂಮಿಯನ್ನು ಖರೀದಿಸಿ ಕನ್ನಡ ಭವನವನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ದಶಕಗಳಿಂದಲೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಕನ್ನಡಿಗರು ಬೇಡಿಕೆ ಇಟ್ಟಿದ್ದಾರೆ. ಆದರೆ, ಈವರೆಗೂ ಗೋವಾ ಸರ್ಕಾರ ಭೂಮಿಯನ್ನು ಒದಗಿಸಿಲ್ಲ. ಈಗ ಅಲ್ಲಿನ ಮುಖ್ಯಮಂತ್ರಿಗಳು, ಗೋವಾ ಕನ್ನಡಿಗರಿಗೆ ಭೂಮಿ ಖರೀದಿಸಿ, ಭವನ ನಿರ್ಮಿಸಿಕೊಳ್ಳಿ ಎಂದು ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷ ಎಂದರೆ, ಕಳೆದ ಬಜೆಟ್ ಮಂಡನೆ ವೇಳೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಎತ್ತಿಟ್ಟಿದ್ದಾರೆ.
ಇದನ್ನೂ ಓದಿ | ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ರೆಡಿ, ಸಿಎಂ ಪ್ರಮೋದ್ ಸಾವಂತ್ ಭೇಟಿ