Site icon Vistara News

Puri Jagannath Temple: ಪುರಿ ಜಗನ್ನಾಥ ಮಂದಿರದ ನಕಲಿ ಕೀ ಪತ್ತೆ; ಅಪಾರ ಪ್ರಮಾಣದ ಬಂಗಾರ ಕಳವು?

Puri Jagannath Temple

ಭುವನೇಶ್ವರ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ಮಂದಿರ (Puri Jagannath Temple)ದ ರತ್ನ ಭಂಡಾರ (Ratna Bhandar)ದಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಈ ಮಧ್ಯೆ ನಕಲಿ ಕೀ ಬಳಸಿ ರತ್ನ ಭಂಡಾರವನ್ನು ತೆರೆದು ಅಪಾರ ಪ್ರಮಾಣದ ಚಿನ್ನ ಕಳವು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆದು ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಭಂಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾಗಿದ್ದ ಜಗದೀಶ್ ಮೊಹಾಂತಿ ಅವರು ಭಂಡಾರದಿಂದ ಚಿನ್ನ ಕಳುವಾಗಿದೆ ಎಂಬ ಬಾಂಬ್‌ ಸಿಡಿಸಿದ್ದಾರೆ.

ʼʼಆಭರಣಗಳನ್ನು ಕದಿಯುವ ಉದ್ದೇಶದಿಂದ ನಕಲಿ ಕೀಲಿಗಳನ್ನು ಬಳಸಲಾಗಿದೆ. ಹೀಗಾಗಿ ರತ್ನ ಭಂಡಾರಗಳನ್ನು ತೆರೆಯುವಾಗ ಕೀಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬೀಗಗಳನ್ನು ಮುರಿಯಬೇಕಾಯಿತುʼʼ ಎಂದು ಅವರು ಹೇಳಿದ್ದಾರೆ. ʼʼನಕಲಿ ಕೀ ಬಳಕೆಯ ಹಿಂದೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುವ ಕ್ರಿಮಿನಲ್ ಉದ್ದೇಶವಿದೆ” ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಜುಲೈ 14ರಂದು ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು 46 ವರ್ಷಗಳ ಬಳಿಕ ತೆರೆಯಲಾಗಿತ್ತು. ಆದರೆ ಮೂಲ ಕೀ ಕಾಣೆಯಾದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರು ರತ್ನ ಭಂಡಾರದ ಒಳ ಕೋಣೆಗೆ ಪ್ರವೇಶಿಸಲು ಮೂರು ಬೀಗಗಳನ್ನು ಮುರಿದಿದ್ದರು. ಮೂಲ ಕೀಲಿ 2018ರಲ್ಲಿ ಕಾಣೆಯಾಗಿದ್ದವು. ಹೀಗಾಗಿ ಇದರ ತನಿಖೆಗೆ ಹಿಂದಿನ ನವೀನ್ ಪಟ್ನಾಯಕ್ ಸರ್ಕಾರವು ಒರಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಘುಬೀರ್ ದಾಸ್ ನೇತೃತ್ವದ ತಂಡವನ್ನು ನೇಮಿಸಿತ್ತು.

ರತ್ನ ಭಂಡಾರದ ಒಳಗಿರುವ ಕಪಾಟಿನಿಂದ ಕೀ ಕಾಣೆಯಾಗಿವೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ರತ್ನ ಭಂಡಾರದ ಒಳಗಿನ ಕೋಣೆಯಲ್ಲಿ ಮೂರು ಮರದ ಕಪಾಟು, ಒಂದು ಉಕ್ಕಿನ ಕಪಾಟು, ಎರಡು ಮರದ ಪೆಟ್ಟಿಗೆ ಮತ್ತು ಕಬ್ಬಿಣದ ಪೆಟ್ಟಿಗೆ ಇದೆ. ದೇವಾಲಯದ ಆಡಳಿತದ ಮೂಲಗಳ ಪ್ರಕಾರ, ಮರದ ಕಪಾಟುಗಳ ಪೈಕಿ ಒಂದನ್ನು ಮಾತ್ರ ಲಾಕ್ ಮಾಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯ ಪೈಕಿ ಎರಡು ಲಾಕ್ ಕಾರ್ಯವಿಧಾನಗಳನ್ನು ಹೊಂದಿತ್ತು, ಆದರೆ ಒಂದರ ಬೀಗ ತೆರೆದಿತ್ತು. ಇದು ಸಂಶಯಕ್ಕೆ ಕಾರಣವಾಗಿದೆ.

ಸರ್ಪ ಕಾವಲು ಸುಳ್ಳು

ಅಲ್ಲದೆ ರತ್ನ ಭಂಡಾರವನ್ನು ವಿಷಕಾರಿ ಹಾವುಗಳು ಕಾಯುತ್ತಿವೆ ಎನ್ನುವುದು ಸುಳ್ಳು ಸುದ್ದಿ ಎಂದೂ ಜಗದೀಶ್ ಮೊಹಾಂತಿ ತಿಳಿಸಿದ್ದಾರೆ. ಕಳ್ಳತನವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಸುದ್ದಿಯನ್ನು ಹರಡಿರಬಹುದು ಎಂದು ಅವರು ಶಂಕಿಸಿದ್ದಾರೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲು ದೇವಾಲಯದ ಆಡಳಿತವು ಇನ್ನೂ ಸರ್ಕಾರವನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ.

ಏನಿದು ರತ್ನ ಭಂಡಾರ?‌

ದೇವರ ಆಭರಣ ಪೆಟ್ಟಿಗೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಹೊರ ಭಂಡಾರ’ ಎಂದು ಕರೆಯಲಾಗುವ ಭಾಗದಲ್ಲಿ ವಾರ್ಷಿಕ ರಥೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಬಳಸುವ ಉಡುಪುಗಳು, ಆಭರಣಗಳಿವೆ. ‘ಒಳ ಭಂಡಾರ’ ಎಂದು ಕರೆಯುವ ಮತ್ತೊಂದು ಭಾಗದಲ್ಲಿ ರಾಜರಿಂದ ಕಾಣಿಕೆಯಾಗಿ ಲಭಿಸಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳಿವೆ. ‘ಒಳ ಭಂಡರ’ವನ್ನು ಕೊನೆಯ ಬಾರಿ 1978ರಲ್ಲಿ ತೆರೆಯಲಾಗಿತ್ತು. ಅದಾದ ಬಳಿಕ ಜುಲೈ 14ರಂದು ಬಾಗಿಲು ತೆರೆಯಲಾಗಿತ್ತು.

ಇದನ್ನೂ ಓದಿ: Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Exit mobile version