ನವದೆಹಲಿ: 2019ರ ಮಾನ ಹಾನಿ ಪ್ರಕರಣದಲ್ಲಿ (Defamation Case) ರಾಹುಲ್ ಗಾಂಧಿ (Rahul Gandhi) ಅವರಿಗೆ ನೀಡಲಾದ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ (Gujarat High Court) ಇತ್ತೀಚೆಗೆ ನಿರಾಕರಿಸಿತ್ತು. ಹಾಗಾಗಿ, ಅವರು ಸುಪ್ರೀಂ ಕೋರ್ಟ್‌ಗೆ (Supreme Court) ಮೊರೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಪಿರ್ಯಾದಾರ ಕೂಡ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣ ಸಂಬಂಧ ಯಾವುದೇ ಆದೇಶ ನೀಡುವ ಮುನ್ನ ತಮ್ಮ ವಾದವನ್ನು ಆಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದ ಭಾರತೀಯ ಜನತಾ ಪಾರ್ಟಿಯ ಶಾಸಕ ಪೂರ್ಣೇಶ್ ಮೋದಿ (BJP MLA Purnesh Modi) ಅವರು, ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ (Caveat Application) ದಾಖಲಿಸಿದ್ದಾರೆ.
ಕೇವಿಯಟ್ ಎನ್ನುವುದು ಕೆಳ ನ್ಯಾಯಾಲಯದಲ್ಲಿ ಮೊಕದ್ದಮೆಗೆ ಅರ್ಜಿದಾರರು ಸಲ್ಲಿಸಿದ ಮನವಿಯಾಗಿದ್ದು, ಕೆಳ ನ್ಯಾಯಾಲಯದಲ್ಲಿ ಯಶಸ್ವಿಯಾಗದ ಎದುರಾಳಿ ಪಾರ್ಟಿಯು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸುತ್ತದೆ. ಕೇವಿಯಟ್ ಸಲ್ಲಿಸಿದ ನಂತರ, ಯಾವುದೇ ಆದೇಶವನ್ನು ನೀಡುವ ಮೊದಲು ನ್ಯಾಯಾಲಯವು ಎರಡೂ ಕಡೆಯ ವಾದವನ್ನು ಆಲಿಸಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಜಾಲತಾಣದ ಪ್ರಕಾರ, ಜುಲೈ 7ರಂದು ಕೇವಿಯಟ್ ದಾಖಲಿಸಲಾಗಿದೆ. ವಿಶೇಷ ಎಂದರೆ, ಅದೇ ದಿನ ಗುಜರಾತ್ ಹೈಕೋರ್ಟ್ ರಾಹುಲ್ ಗಾಂಧಿ ಅವರಿಗೆ ನೀಡಲಾದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿ ತೀರ್ಪು ನೀಡಿತ್ತು. ಅತ್ತ ತೀರ್ಪು ಹೊರ ಬೀಳುತ್ತಿದ್ದಂತೆ ಫಿರ್ಯಾದಾರರು ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ಮತ್ತೆ ಸೋಲು; ಜೈಲು ಶಿಕ್ಷೆಗೆ ತಡೆ ನೀಡದ ಗುಜರಾತ್ ಹೈಕೋರ್ಟ್
ಒಂದು ವೇಳೆ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಹೈಕೋರ್ಟ್ ವಿರುದ್ದ ಮನವಿ ಸಲ್ಲಿಸಿದರೆ, ಈ ವೇಳೆ ನ್ಯಾಯಾಲಯವು ತಮ್ಮ ವಾದವನ್ನೂ ಅಲಿಸಬೇಕು ಪೂರ್ಣೇಶ್ ಮೋದಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಕೇವಿಯಟ್‌ನಲ್ಲಿ ತಿಳಿಸಿದ್ದಾರೆ.
ಗುಜರಾತ್ ಹೈಕೋರ್ಟ್ ಏನು ಹೇಳಿತ್ತು?
2019ರಲ್ಲಿ ಮೋದಿ ಸರ್ನೇಮ್ಗೆ (Modi Sir name Case) ಮಾಡಿದ್ದ ಅಪಮಾನ ಮಾಡಿದ್ದ ಕೇಸ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ತಮ್ಮನ್ನು ದೋಷಮುಕ್ತರನ್ನಾಗಿ ಮಾಡಬೇಕು, ಸೂರತ್ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ (Gujarat High Court) ತಿರಸ್ಕರಿಸಿದೆ. ‘ಸೂರತ್ ಕೋರ್ಟ್ ನೀಡಿದ್ದ ತೀರ್ಪು ಸೂಕ್ತವಾಗಿದೆ, ಕಾನೂನು ಬದ್ಧವಾಗಿದೆ’ ಎಂದು ಹೈಕೋರ್ಟ್ ತಿಳಿಸಿದೆ. ರಾಹುಲ್ ಗಾಂಧಿ ಕಾನೂನು ಹೋರಾಟದಲ್ಲಿ ಇಲ್ಲಿಯೂ ಸೋಲೇ ಉಂಟಾಗಿದ್ದು, ಅವರಿನ್ನು ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದಾಗಿದೆ.
2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2023ರ ಮಾರ್ಚ್ 23ರಂದು ತೀರ್ಪು ನೀಡಿದ್ದ ಸೂರತ್ ಕೋರ್ಟ್ ಈ ಕೇಸ್ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು ಮತ್ತು 2ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜಾಮೀನು ನೀಡಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹರಾದರು. ಬಳಿಕ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಸೂರತ್ ಕೆಳನ್ಯಾಯಾಲಯ ಕೊಟ್ಟಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಸೆಷನ್ಸ್ ಕೋರ್ಟ್ನಲ್ಲೂ ಹಿನ್ನಡೆಯಾಗಿತ್ತು. ರಾಹುಲ್ ಗಾಂಧಿ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೋದಿ ಸರ್ನೇಮ್ಗೆ ಅವಮಾನ ಮಾಡಿದ ಕೇಸ್ನ್ನು ಸೂರತ್ ಕೋರ್ಟ್‌ನಲ್ಲಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರು ವಿಚಾರಣೆ ನಡೆಸಿದ್ದರು. ಮಾರ್ಚ್ 23ರಂದು ತೀರ್ಪು ನೀಡಿ ಎರಡು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ್ದರು. ಹಾಗೇ, ಗುಜರಾತ್ ಹೈಕೋರ್ಟ್ನಲ್ಲಿ ನ್ಯಾಯಾಧೀಶ ಹೇಮಂತ್ ಪ್ರಾಚಕ್ ಅವರು ರಾಹುಲ್ ರಾಹುಲ್ ಗಾಂಧಿ ಅರ್ಜಿ ವಿಚಾರಣೆ ನಡೆಸಿದ್ದರು. ಈ ಹಿಂದೊಮ್ಮೆ ವಿಚಾರಣೆ ಮುಂದೂಡಲಾಗಿತ್ತು.
ಇದನ್ನೂ ಓದಿ: Rahul Gandhi: ಮೋದಿಗೆ ಅವಮಾನ; ರಾಹುಲ್ ಗಾಂಧಿಗೆ ಹೈಕೋರ್ಟ್ ಬಿಗ್ ರಿಲೀಫ್
ಮೋದಿ ಸರ್ನೇಮ್ಗೆ ಅಪಮಾನ ಮಾಡಿದ ಕೇಸ್ಗೆ ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾಗೇ, ವಕೀಲರಾದ ಪ್ರದೀಪ್ ಮೋದಿ ಎಂಬುವರು ಜಾರ್ಖಂಡ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ಈ ಎರಡೂ ಮೊಕದ್ದಮೆಗಳ ವಿಚಾರಣೆಗಳೂ ನಡೆಯುತ್ತಿವೆ.