ನವದೆಹಲಿ: ಜಪಾನ್‌ನ ಟೋಕಿಯೋದಲ್ಲಿ ನಡೆದ ಕ್ವಾಡ್ ಶೃಂಗಸಭೆ (Quad Summit 2022) ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಹೊಗಳಿದ್ದಾರೆ. ಭಾರತದಲ್ಲಿ ಕೊವಿಡ್ 19 ಸಾಂಕ್ರಾಮಿಕ ಕಾಯಿಲೆ ಸಂದರ್ಭವನ್ನು ಪ್ರಧಾನಿ ಮೋದಿಯವರು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆಂದು ಬೈಡನ್ ಶ್ಲಾಘಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೈಡನ್ ಈ ವಿಚಾರದಲ್ಲಿ ಭಾರತವನ್ನು ಹೊಗಳಿದ್ದಲ್ಲದೆ, ಚೀನಾವನ್ನು ಟೀಕಿಸಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತ ಯಶಸ್ವಿಯಾಗಿದ್ದರೆ, ಚೀನಾ ವಿಫಲವಾಯಿತು. ಇದು ಜಗತ್ತಿಗೇ ತಿಳಿದ ವಿಷಯ ಎಂದು ಹೇಳುವ ಮೂಲಕ, ಎರಡೂ ರಾಷ್ಟ್ರಗಳನ್ನು ಹೋಲಿಕೆ ಮಾಡಿ ಮಾತನಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಮಾದರಿಯಲ್ಲಿ ಕಾರ್ಯನಿರ್ವಹಿಸಿಯೂ ಹೇಗೆ ಗೆಲ್ಲಬಹುದು ಎಂಬುದನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯಶಸ್ಸು ತೋರಿಸಿದೆ. ಈ ಮೂಲಕ, ನಿರಂಕುಶ ಪ್ರಭುತ್ವ ಹೊಂದಿರುವ ಚೀನಾ-ರಷ್ಯಾಗಳಂಥ ರಾಷ್ಟ್ರಗಳು ಮಾತ್ರ ವೇಗವಾಗಿ ಬದಲಾಗುತ್ತಿರುವ ಜಗತ್ತಿನೊಂದಿಗೆ, ಅಷ್ಟೇ ವೇಗವಾಗಿ ಹೆಜ್ಜೆಹಾಕಬಲ್ಲವು. ಈ ದೇಶಗಳಿಂದ ಮಾತ್ರ ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯ. ಪ್ರಜಾಪ್ರಭುತ್ವ ಮಾದರಿಯ ದೇಶಗಳಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವುದಾದರೂ ಹೆಚ್ಚಿನ ಕಾಲಾವಧಿ ಬೇಕು ಎಂಬ ನಂಬಿಕೆ ಒಂದು ಮಿಥ್ಯೆ ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ ಎಂದೂ ಬೈಡನ್ ಹೇಳಿದ್ದಾರೆ. ಅಂದಹಾಗೇ, ಬೈಡನ್ ಇದನ್ನೆಲ್ಲ ಹೇಳಿದ್ದು ತಾವು ಭಾಷಣ ಮಾಡುವಾಗ ಅಲ್ಲ. ಕ್ವಾಡ್ ನಾಯಕರೆಲ್ಲ ಸೇರಿ ಚರ್ಚೆಯಲ್ಲಿ ತೊಡಗಿದ್ದಾಗ ಮೋದಿಯವರನ್ನು ಹೊಗಳಿದ್ದಾರೆ.
ಇದನ್ನೂ ಓದಿ: ಗುಜರಾತ್‌ಗೆ ನರೇಂದ್ರ ಮೋದಿ ಆಗಾಗ ಭೇಟಿ, ಪಟೇಲ್ ಸಮುದಾಯ ಸೆಳೆಯಲು ಆದ್ಯತೆ
ಇದೇ ವೇಳೆ ಉಪಸ್ಥಿತರಿದ್ದ ಆಸ್ಟ್ರೇಲಿಯಾದ ಹೊಸ ಪ್ರಧಾನಮಂತ್ರಿ ಅಂಥೋನಿ ಅಲ್ಬನೀಸ್ ಪ್ರತಿಕ್ರಿಯೆ ನೀಡಿ, ಭಾರತ ತಾನು ಕೊವಿಡ್ 19 ವಿರುದ್ಧ ಹೋರಾಟ ಮಾಡುತ್ತ, ಇತರ ದೇಶಗಳಿಗೂ ಸಹಾಯ ಮಾಡಿದೆ. ಭಾರತ ಹಲವು ದೇಶಗಳಿಗೆ ಕೊರೊನಾ ಲಸಿಕೆಗಳನ್ನು ರಫ್ತು ಮಾಡಿದ್ದರಿಂದ ಆ ದೇಶಗಳಿಗೆ ತುಂಬ ಅನುಕೂಲವಾಯಿತು. ಭಾರತದ ಕೊವಿಡ್ 19 ಲಸಿಕೆಗಳು ಅಲ್ಲಿ ಬದಲಾವಣೆ ಉಂಟು ಮಾಡಿದವು. ಯಾವುದೇ ವಿಷಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಿ, ಅದರಲ್ಲಿ ಗೆಲುವು ಪಡೆಯುವುದಕ್ಕಿಂತ ಇಂಥ ವಿಚಾರದಲ್ಲಿ ಗೆಲ್ಲುವುದು ತುಂಬ ಮಹತ್ವದ್ದು ಎಂದು ಹೇಳಿದರು. ಈ ಮೂಲಕ ಭಾರತ ಉಳಿದ ದೇಶಗಳಿಗೆ ಅಗತ್ಯ ನೆರವು ನೀಡುವ ಮೂಲಕ ಜಗತ್ತಿನ ಎದುರು ಗೆದ್ದಿದೆ ಎಂಬುದನ್ನು ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದರು. ಇದೇ ವೇಳೆ ಜಪಾನ್ ಪ್ರಧಾನಮಂತ್ರಿ ಫೂಮಿಯೋ ಕಿಶಿಡಾ ಕೂಡ ಭಾರತವನ್ನು ಶ್ಲಾಘಿಸಿದ್ದಾರೆ. ಕ್ವಾಡ್ ಲಸಿಕಾ ಉಪಕ್ರಮದ ಮೂಲಕ ಭಾರತದ ಕೊವಿಡ್ 19 ಲಸಿಕೆಗಳನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾಗಳಿಗೆ ಕಳಿಸಿದ್ದನ್ನು ನೆನಪಿಸಿಕೊಂಡರು.
ಇದನ್ನೂ ಓದಿ: ಭಾಷಾ ವೈವಿಧ್ಯತೆ ದೇಶದ ಹೆಮ್ಮೆ, ಅದರಲ್ಲಿ ವೈಷಮ್ಯ ಸೃಷ್ಟಿಸುವ ಪ್ರಯತ್ನ ಬೇಡ: ಪ್ರಧಾನಿ ಮೋದಿ