Site icon Vistara News

Quit India: ಮಹಾತ್ಮ ಗಾಂಧಿ ಮೊಮ್ಮಗ ತುಷಾರ್‌ ಗಾಂಧಿ ಬಂಧನ

tushar gandhi

ಮುಂಬಯಿ: ಮಹಾತ್ಮಾ ಗಾಂಧಿ (Mahatma Gandhi) ಅವರ ಮೊಮ್ಮಗ ತುಷಾರ್ ಗಾಂಧಿ (Tushar Gandhi) ಅವರನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆಯಲಿರುವ ಕ್ವಿಟ್ ಇಂಡಿಯಾ ಚಳವಳಿಯ (quit India movement) ದಿನದ ನೆನಪಿನ ಕಾರ್ಯಕ್ರಮಕ್ಕಾಗಿ ತಮ್ಮ ಮನೆಯಿಂದ ಹೊರಟಾಗ ಅವರನ್ನು ಸಾಂತಾಕ್ರೂಜ್ ಪೊಲೀಸರು ವಶಪಡಿಸಿಕೊಂಡು ಠಾಣೆಗೆ ಕರೆದೊಯ್ದರು.

ತುಷಾರ್‌ ಗಾಂಧಿ ಇದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದರು. “ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಾನು ಆಗಸ್ಟ್ 9ರ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಮನೆಯಿಂದ ಹೊರಟಾಗ ಸಾಂತಾಕ್ರೂಜ್ ಪೊಲೀಸರು ನನ್ನನ್ನು ಬಂಧಿಸಿದರು. ನನ್ನ ಅಜ್ಜ- ಅಜ್ಜಿಯರಾದ ಬಾಪು ಮತ್ತು ಬಾ ಅವರನ್ನೂ ಇದೇ ಐತಿಹಾಸಿಕ ದಿನಾಂಕದಂದು ಬ್ರಿಟಿಷ್ ಪೊಲೀಸರು ಬಂಧಿಸಿದ್ದರು, ಇದು ನನಗೆ ಹೆಮ್ಮೆ” ಎಂದು ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಅಪ್‌ಡೇಟ್‌ ನೀಡಿದ ಅವರು, “ಪೊಲೀಸ್ ಠಾಣೆಯಿಂದ ಹೊರಹೋಗಲು ನನಗೆ ಅನುಮತಿ ದೊರೆತ ತಕ್ಷಣ ನಾನು ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹೋಗುತ್ತೇನೆ. ಖಂಡಿತವಾಗಿಯೂ ಆಗಸ್ಟ್ ಕ್ರಾಂತಿ ದಿನವನ್ನು ಮತ್ತು ಹುತಾತ್ಮರನ್ನು ಸ್ಮರಿಸುತ್ತೇನೆ” ಎಂದು ಟ್ವೀಟ್ ಮಾಡಿದರು.

ಇಂದು ಕ್ವಿಟ್ ಇಂಡಿಯಾ ದಿನದ 81ನೇ ವಾರ್ಷಿಕೋತ್ಸವ. ಕ್ವಿಟ್ ಇಂಡಿಯಾ ಚಳವಳಿಯು ಆಗಸ್ಟ್ 9, 1942ರಂದು ಶುರುವಾಗಿತ್ತು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಈ ಆಂದೋಲನ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಅಂತಿಮ ಹಂತಗಳಲ್ಲಿ ಒಂದು. ಲಕ್ಷಾಂತರ ಭಾರತೀಯರು ಬೀದಿಗಿಳಿದು ಬ್ರಿಟಿಷರ ಆಡಳಿತದ ವಿರುದ್ಧ ʼಮಾಡು ಇಲ್ಲವೇ ಮಡಿ; ಹೋರಾಟ ಮಾಡಿದರು.

ಇದನ್ನೂ ಓದಿ: Arun Manilal Gandhi: ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಮಣಿಲಾಲ್ ಗಾಂಧಿ ನಿಧನ

Exit mobile version