Site icon Vistara News

Qutub Minar ಪೂಜಾಸ್ಥಳವಲ್ಲ, ಕೇವಲ ಸ್ಮಾರಕ ಅಷ್ಟೆ ಎಂದ ಪ್ರಾಚ್ಯ ವಸ್ತು ಇಲಾಖೆ

Qutub Minar

ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ರಚನೆಯಾಗಿರುವ ಕುತುಬ್‌ ಮಿನಾರ್‌ (Qutub Minar) ಒಂದು ಸ್ಮಾರಕವೇ ಹೊರತು ಪೂಜಾ ಸ್ಥಳವಲ್ಲ ಎಂದು ಪ್ರಾಚ್ಯ ವಸ್ತು ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಚೀನ ಸ್ಮಾರಕಗಳ ಕಾಯಿದೆ ಪ್ರಕಾರ ಇದು ಒಂದು ಸ್ಮಾರಕವೇ ಹೊರತು ಇಲ್ಲಿ ಪೂಜೆ ಮಾಡಲು ಇಲ್ಲಿ ಅವಕಾಶ ಕೊಡಲು ಆಗದು ಎಂದು ದೆಹಲಿಯ ಕೋರ್ಟ್‌ಗೆ ಸಲ್ಲಿಸಿದ ಅಫಿದವಿಟ್‌ನಲ್ಲಿ ತಿಳಿಸಿದೆ.

ಕುತುಬ್‌ ಮಿನಾರ್‌ (Qutub Minar) ಸಂಕೀರ್ಣದಲ್ಲಿರುವ ದೇವರ ಮೂರ್ತಿಗಳನ್ನು ಮರುಸ್ಥಾಪನೆ ಮಾಡಬೇಕು ಮತ್ತು ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಹರಿಶಂಕರ್‌ ಜೈನ್‌ ಅವರನ್ನೊಳಗೊಂಡ ಗುಂಪೊಂದು ಸಲ್ಲಿಸಿದ ದಾವೆಯ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ಎಎಸ್‌ಐ ಈ ಮಾಹಿತಿ ನೀಡಿದೆ. ಇದರ ಜತೆಗೆ ಕೋರ್ಟ್‌ ಕೂಡಾ ಅರ್ಜಿದಾರರನ್ನು ಹಲವು ಪ್ರಶ್ನೆಗಳನ್ನು ಕೇಳಿದೆ.

ಕೋರ್ಟ್‌ ಹೇಳಿದ್ದೇನು?
ಒಂದೊಮ್ಮೆ ಇಲ್ಲಿನ ಸಂಕೀರ್ಣದಲ್ಲಿ ಪೂಜೆಗೆ ಅವಕಾಶ ನೀಡಿದರೆ ದೇಶದ ಸಂವಿಧಾನದ ಹಂದರ ಮತ್ತು ಜಾತ್ಯತೀತ ಚೌಕಟ್ಟಿಗೆ ಹಾನಿಯಾಗಲಿದೆ ಎಂದ ಕೋರ್ಟ್‌ ಅರ್ಜಿದಾರರನ್ನು ಕಟುವಾಗಿ ಕೆಲವು ಪ್ರಶ್ನೆಗಳನ್ನು ಕೇಳಿತು. ʻʻಈ ಸ್ಮಾರಕವನ್ನು ನೀವು ದೇವಾಲಯವಾಗಿ ಪರಿವರ್ತಿಸಬೇಕು ಎನ್ನುತ್ತೀರಲ್ಲಾ.. ಅರ್ಜಿದಾರರು ಇದರ ಹಕ್ಕುದಾರರು ಎನ್ನುತ್ತೀರಲ್ಲಾ.. 800 ವರ್ಷಗಳ ಹಿಂದಿನಿಂದ ಇದೆ ಎನ್ನಲಾದ ಈ ಸಂಕೀರ್ಣದ ಮೇಲೆ ನಿಮಗೆ ಕಾನೂನುಬದ್ಧ ಹಕ್ಕು ಸಿಕ್ಕಿದ್ದು ಹೇಗೆ?ʼ ಎಂದು ಕೋರ್ಟ್‌ ಪ್ರಶ್ನಿಸಿತು.

ಕುತುಬ್‌ ಮಿನಾರ್‌ (Qutub Minar) ಒಂದು ಸ್ಮಾರಕವಾಗಿದ್ದು, ಇಲ್ಲಿನ ನಿರ್ಮಾಣಗಳ ಮೇಲೆ ಯಾರೂ ಕೂಡಾ ಮೂಲಭೂತ ಹಕ್ಕು ಸಾಧನೆ ಮಾಡುವ ಹಾಗಿಲ್ಲ ಎಂದು ಪ್ರಾಚ್ಯ ವಸ್ತು ಇಲಾಖೆ ಕೋರ್ಟ್‌ಗೆ ಹೇಳಿತು.

27 ದೇವಳಗಳಿವೆ ಎಂದ ಅರ್ಜಿ
ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 27 ದೇವಾಲಯಗಳಿದ್ದವು. ಕುತುಬ್‌ ಮಿನಾರ್‌ ನಿರ್ಮಾಣಕ್ಕಾಗಿ ಅವುಗಳನ್ನು ದ್ವಂಸಗೊಳಿಸಲಾಗಿದೆ. ಹೀಗಾಗಿ ಅವೆಲ್ಲವನ್ನೂ ಮರು ಸ್ಥಾಪಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಈ ಮನವಿಗೆ ಆಕ್ಷೇಪ ಎತ್ತಿರುವ ಪ್ರಾಚ್ಯವಸ್ತು ಇಲಾಖೆ, ʻʻಇಲ್ಲಿ ಪೂಜೆ ಆರಂಭಿಸಲು ಅವಕಾಶ ನೀಡಲು ಸಾಧ್ಯವಿಲ್ಲ. ಈ ಸ್ಥಳವನ್ನು ʻಸಂರಕ್ಷಿತ ಪ್ರದೇಶʼ ಎಂದು ಘೋಷಿಸುವಾಗ ಅಂತ ಪೂಜೆಗಳಾವುವೂ ಇಲ್ಲಿ ನಡೆಯುತ್ತಿರಲಿಲ್ಲ. ಹಾಗಾಗಿ ಯಥಾಸ್ಥಿತಿಯನ್ನು ಕಾಯುವ ನಿಟ್ಟಿನಲ್ಲಿ ಹೊಸ ಪದ್ಧತಿ ಆರಂಭಕ್ಕೆ ಅವಕಾಶವಿಲ್ಲ,ʼʼ ಎಂದು ಹೇಳಿದೆ.

ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಕುತುಬ್‌ ಮಿನಾರ್‌ನ್ನು ನಿರ್ಮಾಣ ಮಾಡಿದ್ದು ಕುತುಬ್‌ ಅಲ್‌ ದಿನ್‌ ಐಬಕ್‌ ಅಲ್ಲ, ಬದಲಾಗಿ ರಾಜಾ ವಿಕ್ರಮಾದಿತ್ಯ ಎಂದು ಪ್ರಾಚ್ಯ ವಸ್ತು ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾಗಿರುವ ಧರ್ಮವೀರ್‌ ಶರ್ಮ ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೆ ಹೊಸ ಜೀವ ನೀಡಿದೆ. ಇದರ ಜತೆಗೆ, ಕುತುಬ್‌ ಮಿನಾರ್‌ನಲ್ಲಿ ಪತ್ತೆಯಾಗಿರುವ ಹಿಂದೂ ಮತ್ತು ಜೈನ ಮೂರ್ತಿಗಳ ಪ್ರತಿಮಾ ಶಾಸ್ತ್ರ ಅಧ್ಯಯನ (Iconographic study) ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಸ್ಕೃತಿ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ. ಆದರೆ, ಪ್ರದೇಶದಲ್ಲಿ ನಡೆಯುತ್ತಿರುವ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ತಡೆಯುವ ಇಲ್ಲವೇ ಜಾಗದಲ್ಲಿ ಉತ್ಖನನ ನಡೆಸುವ ಚಿಂತನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಇದನ್ನೂ ಓದಿ | ಮಳಲಿ ಮಸೀದಿ ವಿವಾದ ಸಂಬಂಧ ನಾಳೆ ತಾಂಬೂಲ ಪ್ರಶ್ನೆ

ಅದಕ್ಕಿಂತ ಮೊದಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ತರುಣ್‌ ವಿಜಯ್‌ ಅವರು, ಕುವ್ವತ್‌ ಉಲ್‌ ಇಸ್ಲಾಂ ಮಸೀದಿಯ ಪಕ್ಕದಲ್ಲಿ ಎರಡು ಗಣೇಶ ವಿಗ್ರಹಗಳು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿವೆ. ಅವುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದ್ದರು. ಇಡೀ ಮಸೀದಿಯಲ್ಲೇ ದೇವಾಲಯವನ್ನು ಒಡೆದು ಕಟ್ಟಿರುವುದರಿಂದ ಅಲ್ಲಲ್ಲಿ ಇಂಥ ಮೂರ್ತಿಗಳು ಕಂಡುಬರುತ್ತಿವೆ ಎಂದು ತರುಣ್‌ ವಿಜಯ್‌ ಹೇಳಿದ್ದರು.

ಭಾರಿ ಪ್ರತಿಭಟನೆ
ಇದೆಲ್ಲಕ್ಕಿಂತ ಮೊದಲು ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಕುತುಬ್‌ ಮಿನಾರ್‌ ಎದುರು ದೊಡ್ಡ ಪ್ರತಿಭಟನೆಯೊಂದನ್ನು ಆಯೋಜಿಸಿದ್ದರು. ಅವರ ಪ್ರಧಾನ ಬೇಡಿಕೆ ಏನೆಂದರೆ, ಕುವ್ವತ್‌ ಉಲ್‌ ಇಸ್ಲಾಂ ಮಸೀದಿಯ ಬಳಿ ಸಿಕ್ಕಿರುವ ಮೂರ್ತಿಗಳ ಮರು ಸ್ಥಾಪನೆ ಆಗಬೇಕು, ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಪೂಜೆಗೆ ಅವಕಾಶ ನೀಡಬೇಕು.

ಇದನ್ನೂ ಓದಿ | ತಾಜ್‌ ನಲ್ಲಿ ಮುಚ್ಚಿದ ಕೋಣೆಗಳು 22 ಅಲ್ಲ 100! ಆದರೆ ಮೂರ್ತಿಗಳಿಲ್ಲ ಅಂತಿದೆ ಎಎಸ್‌ಐ

Exit mobile version