Site icon Vistara News

Land For Job Scam: ಲಂಚದ ಭೂಮಿಯನ್ನು ಮಾಲಿ ಹೆಸರಿಗೂ ಬರೆಸಿದ್ದ ಲಾಲು ಕುಟುಂಬ!

Lalu Prasad Yadav And Rabri Devi

Rabri Devi's 'gaushala' worker got property as bribe from job seeker: Probe agency

ಪಟನಾ: ಉದ್ಯೋಗಕ್ಕಾಗಿ ಭೂಮಿಯನ್ನು ಲಂಚವಾಗಿ ಪಡೆದಿರುವ ಪ್ರಕರಣದಲ್ಲಿ (Land For Job Scam) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ ಅವರ ವಿರುದ್ಧ ಇ.ಡಿ ಗಂಭೀರ ಆರೋಪ ಮಾಡಿದೆ. ಉದ್ಯೋಗಕ್ಕಾಗಿ ಅಭ್ಯರ್ಥಿಯೊಬ್ಬ ಲಂಚವಾಗಿ ನೀಡಿದ ಜಮೀನನ್ನು ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಅವರ ಪತ್ನಿ ರಾಬ್ರಿ ದೇವಿ (Rabri Devi) ಒಡೆತನದ ಗೋಶಾಲೆಯ ಕೆಲಸಗಾರನೊಬ್ಬನ (Gaushala Worker) ಹೆಸರಿಗೂ ಬರೆಸಲಾಗಿತ್ತು ಎಂದು ಇ.ಡಿ ಅಧಿಕಾರಿಗಳು ಮಹತ್ವದ ಉಲ್ಲೇಖ ಮಾಡಿದ್ದಾರೆ.

ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಲಾಲು ಪ್ರಸಾದ್‌ ಯಾದವ್‌ ಅವರನ್ನು ಸೋಮವಾರ (ಜನವರಿ 29) ಸುಮಾರು 10 ಗಂಟೆ ವಿಚಾರಣೆ ನಡೆಸಿದ್ದಾರೆ. ಮಂಗಳವಾರ (ಜನವರಿ 30) ಲಾಲು ಪ್ರಸಾದ್‌ ಯಾದವ್‌ ಪುತ್ರ, ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರನ್ನು ಕೂಡ ವಿಚಾರಣೆ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಇ.ಡಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಗೋಶಾಲೆ ನೌಕರನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿರುವ ಕುರಿತು ಇ.ಡಿ ಉಲ್ಲೇಖಿಸಿದೆ.

ಚಾರ್ಜ್‌ಶೀಟ್‌ ಪ್ರಕಾರ, “ರೈಲ್ವೆ ಉದ್ಯೋಗ ಪಡೆಯಲು ಅಭ್ಯರ್ಥಿಯೊಬ್ಬ ಲಂಚವಾಗಿ ನೀಡಿದ ಜಮೀನನ್ನು ರಾಬ್ರಿ ದೇವಿ ಅವರ ಗೋಶಾಲೆಯ ನೌಕರ ಹೃದಯಾನಂದ ಚೌಧರಿ ಎಂಬಾತನಿಗೆ ವರ್ಗಾಯಿಸಲಾಗಿದೆ. ಇದಾದ ಬಳಿಕ ಹೃದಯಾನಂದ ಚೌಧರಿಯಿಂದ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರಿ ಹೇಮಾ ಯಾದವ್‌ ಅವರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಲಾಲು ಪ್ರಸಾದ್‌ ಯಾದವ್‌ ಕುಟುಂಬದ ರಾಬ್ರಿದೇವಿ, ಮೀಸಾ ಭಾರ್ತಿ, ಹೇಮಾ ಯಾದವ್‌, ತೇಜಸ್ವಿ ಯಾದವ್‌ ಅವರ ವಿರುದ್ಧ ತನಿಖೆ, ವಿಚಾರಣೆ ನಡೆಸುತ್ತಿದೆ.

ಏನಿದು ಪ್ರಕರಣ?

ಲಾಲು ಪ್ರಸಾದ್ ಯಾದವ್ ಅವರು 2004ರಿಂದ 2009ರವರೆಗೆ ರೈಲ್ವೆ ಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಿಬಿಐ ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಸಿಬಿಐ ಲಾಲು-ರಾಬ್ಡಿ ದಂಪತಿಯ ಪುತ್ರಿಯರಾದ ಮಿಸಾ ಮತ್ತು ಹೇಮಾ ಸೇರಿದಂತೆ ಇತರರನ್ನು ಹೆಸರಿಸಿದೆ. ಉದ್ಯೋಗಕ್ಕಾಗಿ ಲಾಲು ಮತ್ತು ಅವರ ಕುಟುಂಬದ ಸದಸ್ಯರ ಅತ್ಯಂತ ಕಡಿಮೆ ದರಕ್ಕೆ ಭೂಮಿಯನ್ನು ಖರೀದಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ಮಗನಿಗೆ ಶ್ರೀರಾಮ ಕನಸಲ್ಲಿ ಬಂದು ಹೀಗೆ ಹೇಳಿದನಂತೆ!

ಲಾಲು ಮತ್ತು ಅವರ ಪತ್ನಿ ರಾಬ್ಡಿ ಹಾಗೂ ಮಕ್ಕಳು ಮಾತ್ರವಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯೋಗಕ್ಕಾಗಿ ಭೂಮಿ ನೀಡಿದ 12 ಜನರ ವಿರುದ್ಧವೂ ಆರೋಪವಿದೆ. 2022ರ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ, ಲಾಲು ಪ್ರಸಾದ್ ಯಾದವ್ ಅವರ ಸಹಾಯಕ ಮತ್ತು ವಿಶೇಷ ಕರ್ತವ್ಯದ ಮಾಜಿ ಅಧಿಕಾರಿ ಭೋಲಾ ಯಾದವ್ ಅವರನ್ನು ಈ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version