Site icon Vistara News

Radhika Khera: ಅಯೋಧ್ಯೆಗೆ ಭೇಟಿ ನೀಡಿದ್ದಕ್ಕೆ ಪಕ್ಷದಲ್ಲಿ ವಿರೋಧ; ಕಾಂಗ್ರೆಸ್‌ ತೊರೆದ ನಾಯಕಿ!

Radhika Khera

Radhika Khera quits Cong days after alleging insult: ‘Went to see Ram Lalla’

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಛತ್ತೀಸ್‌ಗಢ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರ (Radhika Khera) ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಕ್ಷದಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ ಇವರೀಗ ರಾಜೀನಾಮೆ ನೀಡಿದ್ದಾರೆ. “ನಾನು ರಾಮಮಂದಿರಕ್ಕೆ (Ram Mandir) ಭೇಟಿ ನೀಡಿದ ಬಳಿಕ ಪಕ್ಷದಲ್ಲೇ ಟೀಕೆ ಮಾಡಲಾಗುತ್ತಿದೆ. ಹಾಗಾಗಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂಬುದಾಗಿ ರಾಧಿಕಾ ಖೇರ ತಿಳಿಸಿದ್ದಾರೆ.

“ಪ್ರತಿಯೊಬ್ಬ ಹಿಂದುವಿಗೂ ರಾಮಮಂದಿರವು ಪವಿತ್ರ ಹಾಗೂ ಶ್ರದ್ಧಾ ಕೇಂದ್ರವಾಗಿದೆ. ಹಾಗಾಗಿ, ನಾನು ರಾಮಮಂದಿರಕ್ಕೆ ಭೇಟಿ ನೀಡಿದೆ. ನಾನು ಕಾಂಗ್ರೆಸ್‌ಗೆ 22 ವರ್ಷದ ನಿಷ್ಠಾವಂತಳಾಗಿ ದುಡಿದಿದ್ದೇನೆ. ಆದರೆ, ನಾನು ಹಿಂದು ಆಗಿ ರಾಮಮಂದಿರಕ್ಕೆ ಭೇಟಿ ನೀಡುವುದನ್ನು ತಡೆಯಲು ನನಗೇ ಆಗಲಿಲ್ಲ. ಪಕ್ಷದಲ್ಲಿ ಮಾತ್ರ, ನಾನು ರಾಮಮಂದಿರಕ್ಕೆ ಹೋಗಿದ್ದೇ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಇದಕ್ಕಾಗಿಯೇ ನನ್ನನ್ನು ಗುರಿಯಾಗಿಸಿ ಟೀಕಿಸಲಾಗಿದೆ. ಹಾಗಾಗಿ, ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ” ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಛತ್ತೀಸ್‌ಗಢ ಕಾಂಗ್ರೆಸ್‌ನ ಪ್ರಮುಖ ನಾಯಕಿಯಾಗಿದ್ದ ರಾಧಿಕಾ ಖೇರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಧಿಕಾ ಖೇರ ಅವರು ಬಿಜೆಪಿ ಸೇರುತ್ತಾರೋ, ಇಲ್ಲವೇ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕಲ್ಕಿ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ ಚೇರ್ಮನ್‌ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಇವರನ್ನು ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು.

ಇದರ ಕುರಿತು ನರೇಂದ್ರ ಮೋದಿ ಮಾತನಾಡಿದ್ದರು. “ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕೆ ಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು.

ಇದನ್ನೂ ಓದಿ: Keshav Maharaj: ರಾಮಮಂದಿರಕ್ಕೆ ಭೇಟಿ ನೀಡಿದ ಕೇಶವ್​ ಮಹರಾಜ್

Exit mobile version