ನವದೆಹಲಿ: ಆಮ್ ಆದ್ಮಿ ಪಾರ್ಟಿಯ (Aam Aadmi Party) ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ (Rajya Sabha Member Raghav Chadha) ಅವರನ್ನು ಸದನದಿಂದ ಸಸ್ಪೆಂಡ್ (Suspended From Rajya Sabha) ಮಾಡಲಾಗಿದೆ. ಆಯ್ಕೆ ಸಮಿತಿಗೆ ಸೇರಿಸುವ ಮೊದಲು ರಾಜ್ಯಸಭೆಯ ಐವರು ಸದಸ್ಯರ ಒಪ್ಪಿಗೆ ಪಡೆಯದೇ ಅವರ ಹೆಸರನ್ನು ಸೇರ್ಪಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯಸಭೆಯಿಂದ ಅವರನ್ನು ಅಮಾನತು ಮಾಡಲಾಗಿದೆ. ಛಡ್ಡಾ ಅವರ ವಿರುದ್ಧ ಪ್ರಕರಣದ ಕುರಿತು ಹಕ್ಕು ಬಾಧ್ಯತಾ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸೋವರೆಗೂ ಅವರು ಅಮಾನತು ಮುಂದುವರಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಟೀಕೆ ಮಾಡಿದ್ದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಇದಕ್ಕೂ ಮೊದಲು ಆಪ್‌ನ ಮತ್ತೊಬ್ಬ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಅವರನ್ನೂ ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಆಪ್ ಸದಸ್ಯ ರಾಘವ್ ಛಡ್ಡಾ ಅವರನ್ನು ಸಸ್ಪೆಂಡ್ ಮಾಡುವ ನಿರ್ಣಯವನ್ನು ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಪಿಯೂಷ್ ಗೋಯಲ್ ಮಂಡಿಸಿದರು. ರಾಘವ್ ಛಡ್ಡಾ ಅವರ ನಡವಳಿಕೆ ಅನೈತಿಕವಾಗಿದೆ. ಅವರ ಈ ನಡುವಳಿಕೆ ಸಂಸತ್ತಿನ ಸದಸ್ಯರಿಗೆ ತಕ್ಕುದಾದಲ್ಲ ಹಾಗೂ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಗೋಯಲ್ ಹೇಳಿದರು.
ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಎಸ್ ಫಾಂಗ್ನಾನ್ ಕೊನ್ಯಾಕ್, ನರಹರಿ ಅಮೀನ್ ಮತ್ತು ಸುಧಾಂಶು ತ್ರಿವೇದಿ, ಎಐಎಡಿಎಂಕೆಯ ಎಂ ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಅವರು ರಾಘವ್ ಛಡ್ಡಾ ಅವರು ವಿರುದ್ಧ ದೂರಿದ್ದರು. ತಮ್ಮಒಪ್ಪಿಗೆ ಇಲ್ಲದೇ ರಾಘವ್ ಛಡ್ಡಾ ಅವರು, ಸದನದಲ್ಲಿ ಮಂಡಿಸಿದ ಆಯ್ಕೆ ಸಮಿತಿಯಲ್ಲಿ ಹೆಸರನ್ನು ಸೇರಿಸಿದ್ದಾರೆಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Sanjay Singh: ರಾಜ್ಯಸಭೆಯಿಂದ ಆಪ್ ಸಂಸದ ಸಂಜಯ್ ಸಿಂಗ್ ಸಸ್ಪೆಂಡ್
ಆರೋಪ ತಳ್ಳಿ ಹಾಕಿದ ರಾಘವ್ ಛಡ್ಡಾ
ಆದರೆ, ಈ ಆರೋಪಕ್ಕೆ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರು, ಯಾವುದೇ ಸಮಿತಿಯ ರಚನೆಗೆ ಸಂಸದರು ಹೆಸರನ್ನು ಪ್ರಸ್ತಾಪಿಸಬಹುದು ಮತ್ತು ಅವರ ಹೆಸರನ್ನು ಪ್ರಸ್ತಾಪಿಸಿದ ವ್ಯಕ್ತಿಯ ಸಹಿ ಅಥವಾ ಲಿಖಿತ ಒಪ್ಪಿಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನಾನು ಹುಟ್ಟುಹಬ್ಬವನ್ನು ಆಯೋಜಿಸಿ 10 ಜನರನ್ನು ಆಹ್ವಾನಿಸುತ್ತೇನೆ ಎಂದು ಭಾವಿಸೋಣ. ಅವರಲ್ಲಿ ಎಂಟು ಮಂದಿ ಬರುತ್ತಾರೆ ಮತ್ತು ಇಬ್ಬರು ನನ್ನ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಆ ಇಬ್ಬರು ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮನ್ನು ಆಹ್ವಾನಿಸಲು ನಿಮಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸುತ್ತಾರೆ. ನಾನು ಅವರನ್ನು (ಸಂಸದರನ್ನು) ಸಮಿತಿಯ ಭಾಗವಾಗಿರಲು ಆಹ್ವಾನಿಸಿದ್ದೇನೆ ಅಷ್ಟೇ. ಅದು ಹೇಗೆ ತಪ್ಪಾಗುತ್ತದೆ ಎಂದು ರಾಘವ್ ಛಡ್ಡಾ ಅವರು ಪ್ರಶ್ನಿಸಿದ್ದಾರೆ.