ಗಾಂಧಿನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಯಾವುದೇ ಭಾಗಕ್ಕೆ, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಬಂದರೆ ಅವರು ವೇದಿಕೆ ಮೇಲೆ ಭಾಷಣ ಮಾಡುವಾಗ ಅದನ್ನು ಸ್ಥಳೀಯ ಭಾಷೆಗೆ ಭಾಷಾಂತರಗೊಳಿಸಿ ಮಾತನಾಡುವವರ ಕೊರತೆ ಎದ್ದು ಕಾಣುತ್ತದೆ. ಕರ್ನಾಟಕ ಹಾಗೂ ಕೇರಳದಲ್ಲಿ ರಾಹುಲ್ ಗಾಂಧಿಗೆ ಟ್ರಾನ್ಸ್‌ಲೇಟರ್‌ಗಳ ಅಸಮರ್ಪಕ ಭಾಷಾಂತರದಿಂದ ಮುಜುಗರ ಅನುಭವಿಸಿದ್ದಾರೆ. ಈಗ ಇಂತಹದ್ದೇ ಅಚಾತುರ್ಯ ಗುಜರಾತ್‌ನಲ್ಲೂ (Gujarat Election 2022) ನಡೆದಿದೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಇದುವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದ ರಾಹುಲ್ ಗಾಂಧಿ, ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಸೂರತ್‌ನಲ್ಲಿ ಮೊದಲ ಸಾರ್ವಜನಿಕ ರ‍್ಯಾಲಿ ಆಯೋಜಿಸಿದ್ದರು. ಇದೇ ವೇಳೆ ಮಾತನಾಡುವಾಗ ಕಾಂಗ್ರೆಸ್ ಸಂಸದರೊಬ್ಬರು ರಾಹುಲ್ ಗಾಂಧಿ ಹಿಂದಿಯಲ್ಲಿ ಮಾತನಾಡುತ್ತಿದ್ದುದನ್ನು ಗುಜರಾತಿ ಭಾಷೆಗೆ ಭಾಷಾಂತರ ಮಾಡಿ ಜನರಿಗೆ ಹೇಳುತ್ತಿದ್ದರು. ಆದರೆ, ಮಾತನಾಡುವಾಗ ರಾಹುಲ್ ಗಾಂಧಿಗೆ ಮುಜುಗರ ಉಂಟಾಗುವ ಸಂಗತಿ ನಡೆದಿದೆ.
ರಾಹುಲ್ ಹೇಳಿದ್ದನ್ನು ಗುಜರಾತಿಯಲ್ಲಿ ಜನರಿಗೆ ಹೇಳುವಲ್ಲಿ ತಡಕಾಡಿದ ಕಾಂಗ್ರೆಸ್ ಸಂಸದ, “ನೀವು ಹಿಂದಿಯಲ್ಲಿಯೇ ಮಾತನಾಡಿ. ಜನರಿಗೆ ಅದು ಅರ್ಥವಾಗುತ್ತದೆ” ಎಂದು ಕಾಂಗ್ರೆಸ್ ನಾಯಕನ ಭಾಷಣದ ಮಧ್ಯೆಯೇ ಹೇಳಿದ್ದಾರೆ. ಆಗ ರಾಹುಲ್ ಗಾಂಧಿ ಅವರು, “ಹಿಂದಿಯಲ್ಲೇ ಮಾತನಾಡಬಹುದೇ” ಎಂದು ಜನರನ್ನು ಕೇಳುವಷ್ಟರಲ್ಲಿಯೇ ಕಾಂಗ್ರೆಸ್ ಸಂಸದ ವೇದಿಕೆ ಮೇಲಿನಿಂದ ಇಳಿದರು. ಆಗ, “ನಿಮಗೆ ಮಾತನಾಡಲು ಇಷ್ಟವಿಲ್ಲವೇ, ಸರಿ ಹಾಗಾದರೆ” ಎಂದು ರಾಹುಲ್ ಹೇಳಿದರು. ಆದರೆ, ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಸಂಸದ ವೇದಿಕೆ ಇಳಿದು ಹೋಗಿದ್ದರು. ಇಂತಹ ಸನ್ನಿವೇಶ ಎದುರಿಸಿದ ಕಾರಣ ಬಿಜೆಪಿ ವ್ಯಂಗ್ಯ ಮಾಡಿದೆ.
ಇದನ್ನೂ ಓದಿ | Veer Savarkar | ರಾಹುಲ್ ಗಾಂಧಿ ವಿರುದ್ಧ ವೀರ ಸಾವರ್ಕರ್ ಮೊಮ್ಮಗ ಕೇಸ್, ಉದ್ಧವ್ ಠಾಕ್ರೆ ಕೂಡ ಆಕ್ಷೇಪ