Site icon Vistara News

Bharat Nyay Jodo Yatra: ಸುಮ್ಮನಿದ್ರೆ ಸರಿ, ಇಲ್ಲಾಂದ್ರೆ ಅರೆಸ್ಟ್ ಮಾಡಿಸುವೆ! ರಾಹುಲ್‌ಗೆ ಅಸ್ಸಾಮ್ ಸಿಎಂ ಧಮ್ಕಿ

Rahul Gandhi and Assam CM are exchanged words for Bharat Nyay Jodo Yatra

ನವದೆಹಲಿ: ಭದ್ರತಾ ಸಿಬ್ಬಂದಿ ಮೇಲೆ ದಾಳಿಗೆ ರಾಹುಲ್ ಗಾಂಧಿ (Rahul Gandhi) ಅವರು ಪ್ರಚೋದನೆ ನೀಡುತ್ತಿದ್ದಾರೆ ಆರೋಪಿಸಿರುವ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ (Assam CM Himanta Biswa Sarma) ಅವರು, ಲೋಕಸಭೆ ಎಲೆಕ್ಷನ್ ಮುಗಿದ ಬಳಿಕ ಬಂಧಿಸುವ ಬೆದರಿಕೆಯನ್ನು ಹಾಕಿದ್ದಾರೆ. ಭಾರತ ನ್ಯಾಯ ಜೋಡೋ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ ಅವರು ಪ್ರಸ್ತುತ ಅಸ್ಸಾಮ್‌ನಲ್ಲಿದ್ದಾರೆ. ಹಿಮಂತ್ ಸರ್ಕಾರವು ಯಾತ್ರೆಗೆ ತಡೆಯೊಡ್ಡುತ್ತಿದೆ ಎಂದು ರಾಹುಲ್ ಗಾಂಧಿ ಪ್ರತಿ ಆರೋಪ ಮಾಡಿದ್ದಾರೆ(Bharat Nyay Jodo Yatra).

ನಮ್ಮ ಭದ್ರತಾ ಸಿಬ್ಬಂದಿ ಜನರಿಗೆ ಸೇವೆ ಸಲ್ಲಿಸುತ್ತಾರೆ, ಹೊರತು ಯಾವುದೇ ರಾಜ ಕುಟುಂಬಕ್ಕಲ್ಲ ಎಂದು ಹಿಮಂತ್ ಬಿಸ್ವ ಶರ್ಮಾ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿ, ಗಾಂಧಿ ಕುಟುಂಬದ ವಿರುದ್ಧ ಆರೋಪಿಸಿದ್ದಾರೆ. ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಮತ್ತು ಇನ್ನೊಬ್ಬ ಕಾಂಗ್ರೆಸ್ ನಾಯಕ ಜನಸಮೂಹವನ್ನು ಪ್ರಚೋದಿಸುವ ವೀಡಿಯೊವನ್ನು ಕೂಡ ಷೇರ್ ಮಾಡಿದ್ದಾರೆ.

2024ರ ಲೋಕಸಭಾ ಚುನಾವಣೆಯ ನಂತರ ಗಾಂಧಿ ಅವರನ್ನು ಗುವಾಹಟಿಯಲ್ಲಿ ಹಿಂಸಾಚಾರ ಮತ್ತು ಅಸಹಕಾರವನ್ನು ಪ್ರಚೋದಿಸಿದ್ದಕ್ಕಾಗಿ ಬಂಧಿಸಲಾಗುವುದು ಎಂದು ಅಸ್ಸಾಮ್ ಸಿಎಂ ಶರ್ಮಾ ಹೇಳಿದ್ದಾರೆ. ಯಾತ್ರೆ ಸಾಗುವ ರೂಟ್‌ಗೆ ಸಂಬಂಧಿಸಿದಂತೆ ಅಸ್ಸಾಮ್ ಪೊಲೀಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಅಡ್ಡಲಾಗಿಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತೆಸೆದರು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಶರ್ಮಾ ಅವರು ಸೂಚಿಸಿದ್ದಾರೆ. ಅಸ್ಸಾಮ್ ಸರ್ಕಾರವು ರ್ಯಾಲಿಯನ್ನು ವಿಫಲಗೊಳಿಸಿದೆ ಎಂದು ಹೇಳಿದರು.

ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಜಗಳವಾಡಿದ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕ್ಷುಲ್ಲಕ ಕಾರಣಕ್ಕಾಗಿ ರ್ಯಾಲಿಯನ್ನು ಗುವಾಹಟಿ ಪ್ರವೇಶಿಸಲು ಅನುಮತಿಸುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಅಸ್ಸಾಂ ಪೊಲೀಸರು, ನಗರವನ್ನು ಸುತ್ತುವ ಹೆದ್ದಾರಿಯಲ್ಲಿ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಪ್ರಮುಖ “ಭಾರತ್ ಜೋಡೋ ನ್ಯಾಯ್ ಯಾತ್ರೆ”ಗೆ ಅನುಮತಿ ನೀಡಿದ್ದರು. ವಾಸ್ತವದಲ್ಲಿ ರ್ಯಾಲಿಯನ್ನು ಗುವಾಹಟಿ ನಗರದೊಳಗೇ ನಡೆಸಲು ಕಾಂಗ್ರೆಸ್ ಉದ್ದೇಶಿಸಿತ್ತು. ಪರಿಣಾಮ ಅಸ್ಸಾಮ್ ಪೊಲೀಸ್ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷ ಉಂಟಾಗಿದೆ.

ಅಸ್ಸಾಮ್ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಮತ್ತು ಅಸ್ಸಾಮ್‌ನಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾತ್ರೆಗೆ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ತಡೆಯೊಡ್ಡುತ್ತಿದ್ದಾರೆ. ಶರ್ಮಾ ಅತ್ಯಂತ ಭ್ರಷ್ಟ ಸಿಎಂ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಹೆದರದೇ ಎದುರಿಸಬೇಕು. ವಿದ್ಯಾರ್ಥಿಗಳನ್ನು ಗುಲಾಮಿ ಮನೋಸ್ಥಿತಿಗೆ ತಳ್ಳಲಾಗುತ್ತಿದೆ ಎಂದು ಅಸ್ಸಾಮ್ ಮತ್ತು ಮೇಘಾಲಯ ಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲೂ ಅಸ್ಸಾಮ್ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ರಾಹುಲ್ ಗಾಂಧಿ ಅವರು ಮುಂದುವರಿಸಿದರು. “ಭಾರತ್ ಜೋಡೋ ನ್ಯಾಯ್ ಯಾತ್ರೆ” ಎದುರಿಸಿದ ಅಡೆತಡೆಗಳು ಮಾರುವೇಷದಲ್ಲಿ ದೊರೆತ ಆಶೀರ್ವಾದವಾಗಿದೆ. ವಾಸ್ತವವಾಗಿ, ಕಾಂಗ್ರೆಸ್ ರ್ಯಾಲಿಗೆ ಪ್ರಚಾರವನ್ನು ನೀಡುತ್ತಿದೆ. “ನಾವು ಹೆದರುವುದಿಲ್ಲ… ನಾವು ಅವರಿಗೆ ಹೆದರುವುದಿಲ್ಲ. ನಮ್ಮ ನ್ಯಾಯದ ಸಂದೇಶವು ಪ್ರತಿ ಹಳ್ಳಿಗೆ ಹೋಗುತ್ತಿದೆ. ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. ಜನರು ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ದೂರು ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

Exit mobile version