Site icon Vistara News

Rahul Gandhi: ಸರ್ಕಾರಿ ಬಂಗ್ಲೆ ತೆರವು ಮಾಡಲು ರಾಹುಲ್‌ ಗಾಂಧಿಗೆ ನೋಟಿಸ್

Rahul Gandhi asked to vacate govt bungalow and check details

ನವದೆಹಲಿ: 2019ರ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಪರಿಣಾಮ ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಅವರು ಸಂಸತ್ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಬಂಗ್ಲೆಯನ್ನೂ ತೆರವುಗೊಳಿಸಬೇಕಾಗಾಗಿದೆ. ನಿಯಮಗಳ ಪ್ರಕಾರ, ಸದಸ್ಯತ್ವದಿಂದ ಅನರ್ಹಗೊಂಡ ದಿನದಿಂದ 30 ದಿನಗಳ ಒಳಗೆ ಬಂಗ್ಲೆಯನ್ನು ಖಾಲಿ ಮಾಡಬೇಕಾಗುತ್ತದೆ. ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಲೋಕಸಭೆಯ ವಸತಿ ಸಮಿತಿಯು ನೋಟಿಸ್ ಜಾರಿ ಮಾಡಿದೆ.

ರಾಹುಲ್ ಗಾಂಧಿ ಅವರು ಲೋಕಸಭೆಗೆ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದರು. 2004ರಲ್ಲಿ ಅವರು ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಲೋಕಸಭೆ ಸದಸ್ಯರಾಗಿದ್ದರು. ಆದರೆ, 2019ರಲ್ಲಿ ಅಮೇಠಿ ಕ್ಷೇತ್ರದಿಂದ ಸೋಲು ಕಂಡು, ಬಿಜೆಪಿಯ ಅಭ್ಯರ್ಥಿಯಾಗಿದ್ದ ಹಾಲಿ ಸಚಿವೆ ಸ್ಮೃತಿ ಇರಾನಿ ಅವರು ಗೆಲುವು ಸಾಧಿಸಿದ್ದರು. ಅಮೇಠಿಯಲ್ಲಿ ಸೋಲುವ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು 2019ರಲ್ಲಿ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆದರೆ, ಈಗ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಸರ್ಕಾರಿ ಬಂಗ್ಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ಹೌಸಿಂಗ್ ಕಮಿಟಿ ನೋಟಿಸ್ ಜಾರಿ ಮಾಡಿದೆ. ಹಿರಿಯ ಅಧಿಕಾರಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ಬಂಗ್ಲೆ ಖಾಲಿ ಮಾಡಲು ಸೂಚಿಸಲಾಗಿರುವ ಕಾಲಾವಧಿಯನ್ನು ವಿಸ್ತರಿಸುವಂತೆ ಹೌಸಿಂಗ್ ಕಮೀಟಿಯನ್ನು ಕೇಳಿಕೊಳ್ಳಲು ಅವಕಾಶವಿದೆ. ಕೇಂದ್ರ ಸರ್ಕಾರದ ಬಂಗ್ಲೆಗಳ ಹಂಚಿಕೆಯನ್ನು ಎಸ್ಟೇಟ್‌ಗಳ ನಿರ್ದೇಶನಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಜನರಲ್ ಪೂಲ್ ರೆಸಿಡೆನ್ಶಿಯಲ್ ಅಕಾಮೊಡೆಶನ್ (GPRA) ಕಾಯಿದೆಯ ಮೂಲಕ ಮಾಡಲಾಗುತ್ತದೆ.

ರಾಹುಲ್ ಗಾಂಧಿ ಅನರ್ಹಗೊಂಡಿದ್ದೇಕೆ?

ಎಲ್ಲ ಕಳ್ಳರ ಸರ್​ನೇಮ್​ ಮೋದಿ ಎಂದೇ ಇರುತ್ತದೆ ಎಂದು 2019ರ ಚುನಾವಣೆಯಲ್ಲಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

2019ರ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಚಾರ ಮಾಡುತ್ತ ‘ಎಲ್ಲ ಕಳ್ಳರ ಹೆಸರುಗಳ ಉಪನಾಮ ಮೋದಿ ಎಂದೇ ಇರುತ್ತದೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಈ ಹೇಳಿಕೆ ವಿರುದ್ಧ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ದೂರು ನೀಡಿದ್ದರು. ಹಾಗೇ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್​ ಕೋರ್ಟ್ ಮಾ.23ರಂದು ತೀರ್ಪು ನೀಡಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು. ಅಷ್ಟೇ ಅಲ್ಲ, 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. 30 ದಿನಗಳ ಜಾಮೀನು ನೀಡಿತ್ತು. ಅಷ್ಟರೊಳಗೆ ರಾಹುಲ್ ಗಾಂಧಿ ಪರ ಕಾಂಗ್ರೆಸ್​​ನ ಯಾರಾದರೂ ಮೇಲ್ಮನವಿ ಸಲ್ಲಿಸಿ, ಅವರಿಗೆ ನೀಡಿರುವ ಶಿಕ್ಷೆಯನ್ನು ರದ್ದುಗೊಳಿಸಬಹುದು ಎಂದು ಹೇಳಿತ್ತು. ಆದರೆ ಕೋರ್ಟ್​ನ ಈ ಪ್ರಕ್ರಿಯೆಗೂ, ಲೋಕಸಭೆಯ ನಿಯಮಗಳಿಗೂ ಸಂಬಂಧವಿಲ್ಲ. ಲೋಕಸಭೆ ಈಗ ತನ್ನ ಪ್ರಕ್ರಿಯೆ ಮಾಡಿದೆ.

ಇದನ್ನೂ ಓದಿ: Rahul Gandhi: ಕ್ಷಮೆಯಾಚಿಸಲು ನಾನು ಸಾವರ್ಕರ್‌ ಅಲ್ಲ, ಗಾಂಧಿ; ಅನರ್ಹತೆ ಬಳಿಕ ಕೇಂದ್ರಕ್ಕೆ ರಾಹುಲ್‌ ಚಾಟಿ

ಇದೀಗ ಲೋಕಸಭೆ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿ ನೋಟಿಸ್ ಕೊಟ್ಟಿದೆ. ‘ಮಾರ್ಚ್​ 23ರಂದು ರಾಹುಲ್ ಗಾಂಧಿಯನ್ನು ದೋಷಿ ಎಂದು ಸೂರತ್​ ಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ಜನಪ್ರತಿನಿಧಿಗಳ ಕಾಯ್ದೆ 1951ರ, ಆರ್ಟಿಕಲ್​ 102 (1) (e)yಯ ನಿಬಂಧನೆಗಳಡಿ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಹೇಳಿದೆ.

Exit mobile version