Site icon Vistara News

Rahul Gandhi: ಮೋದಿ ಸೇರಿ 6 ಜನರಿಂದ ಭಾರತೀಯರಿಗೆ ಚಕ್ರವ್ಯೂಹ ರಚನೆ ಎಂದ ರಾಹುಲ್‌ ಗಾಂಧಿ; 6 ಜನ ಯಾರ‍್ಯಾರು?

Rahul Gandhi

Rahul Gandhi attacks BJP in Lok Sabha: '6 people control Lotus Chakravyuh'

ನವದೆಹಲಿ: ಕಾಂಗ್ರೆಸ್‌ ನಾಯಕ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ. “ಮಹಾಭಾರತದ ಚಕ್ರವ್ಯೂಹದಂತೆ (Chakravyuh) ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದರು.

“21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ ಹಾಗೂ ಅದು ಕಮಲದ ಆಕಾರದಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನರೇಂದ್ರ ಮೋದಿ ಅವರು ಎದೆಯ ಮೇಲೆ ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಅಭಿಮನ್ಯುವಿಗೆ ಏನಾಯಿತೋ, ಅದರಂತೆ ಭಾರತದ ಜನರನ್ನು ಆ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಿಗಳು ಈಗ ಆ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ” ಎಂದು ರಾಹುಲ್‌ ಗಾಂಧಿ ಕುಹಕವಾಡಿದರು.

ಚಕ್ರವ್ಯೂಹದಲ್ಲಿರುವ 6 ಜನ ಯಾರು?

“ಚಕ್ರವ್ಯೂಹದಲ್ಲಿ ತುಂಬ ಜನ ಇರುತ್ತಾರೆ. ಆದರೆ, ಚಕ್ರವ್ಯೂಹದ ಮಧ್ಯದಲ್ಲಿ 6 ಜನ ಇರುತ್ತಾರೆ ಹಾಗೂ ಅವರು ಇಡೀ ಚಕ್ರವ್ಯೂಹವನ್ನು ನಿಯಂತ್ರಿಸುತ್ತಾರೆ. ಆಧುನಿಕ ಕಾಲದ ಚಕ್ರವ್ಯೂಹವನ್ನು ಕೂಡ ಆರು ಜನ ನಿಯಂತ್ರಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ಮೋಹನ್‌ ಭಾಗವತ್‌, ಅಜಿತ್‌ ದೋವಲ್‌, ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿಯೇ ಈಗ ಕಮಲದ ಆಕಾರದ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಚಕ್ರವ್ಯೂಹ ಭೇದಿಸುತ್ತೇವೆ ಎಂದ ರಾಹುಲ್‌ ಗಾಂಧಿ

ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Exit mobile version