ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸಂಸತ್ ಸದಸ್ಯತ್ವದ ಅನರ್ಹತೆಯನ್ನು ಲೋಕಸಭೆ ಕಾರ್ಯಾಲಯವು ಸೋಮವಾರ (ಆಗಸ್ಟ್ 7) ರದ್ದುಗೊಳಿಸಿದೆ. ಇದಾದ ಬಳಿಕ ರಾಹುಲ್ ಗಾಂಧಿ ಅವರು ಸಂಸತ್‌ಗೆ ತೆರಳಿದ್ದು, ಪಕ್ಷದ ನಾಯಕರು ಘೋಷಣೆ ಕೂಗಿ ಕಾಂಗ್ರೆಸ್ ನಾಯಕನನ್ನು ಸಂಸತ್ತಿಗೆ ಸ್ವಾಗತಿಸಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ (ಈಗ X) ಖಾತೆಯ ಬಯೋವನ್ನು ಸಂಸದ ಎಂಬುದಾಗಿ ಬದಲಿಸಿಕೊಂಡಿದ್ದಾರೆ. ಇನ್ನು, ಅವರಿಗೆ ಸಂಸದ ಸ್ಥಾನ ಮರಳುತ್ತಲೇ ಹಲವು ಸೌಲಭ್ಯಗಳು ಮತ್ತೆ ಸಿಗಲಿವೆ.
ಮತ್ತೆ ಸಿಗಲಿದೆ ನಿವಾಸ
ಮೋದಿ ಉಪನಾಮ ಪ್ರಕರಣದಲ್ಲಿ ಮಾರ್ಚ್ 23ರಂದು ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಮಾರ್ಚ್ 24ರಂದು ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಹಾಗಾಗಿ, ಏಪ್ರಿಲ್ 22ರಂದು ರಾಹುಲ್ ಗಾಂಧಿ ಅವರು 12, ತುಘಲಕ್ ಲೇನ್‌ನಲ್ಲಿರುವ ಬಂಗಲೆಯನ್ನು ಖಾಲಿ ಮಾಡಿದ್ದರು. ಈಗ ಅವರಿಗೆ ಇದೇ ನಿವಾಸವನ್ನು ಮತ್ತೆ ಒದಗಿಸಲಾಗುತ್ತದೆ.
ಸಂಸತ್ತಿಗೆ ಆಗಮಿಸಿದ ರಾಹುಲ್ ಗಾಂಧಿ
ಇತರ ಸೌಲಭ್ಯಗಳು
ಹಾಗೆಯೇ, ರಾಹುಲ್ ಗಾಂಧಿ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅವರಿಗೆ ವಿಶೇಷ ವೀಸಾ ಸಿಗಲಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ಅನ್ನು ಕೂಡ ಅವರು ಪಡೆಯಲಿದ್ದಾರೆ. ಇನ್ನು, ಸಂಬಳ, ದಿನಭತ್ಯೆ, ಪ್ರಯಾಣ ಭತ್ಯೆ, ಪ್ರಯಾಣ ಸೌಕರ್ಯ ಸೇರಿ ಒಬ್ಬ ಸಂಸದನಿಗೆ ಸಿಗುವ ಎಲ್ಲ ಸೌಲಭ್ಯಗಳು ರಾಹುಲ್ ಗಾಂಧಿ ಅವರಿಗೆ ಸಿಗಲಿವೆ. ರಾಹುಲ್ ಗಾಂಧಿ ವಿರುದ್ಧದ ಅನರ್ಹತೆ ಆದೇಶವನ್ನು ರದ್ದುಗೊಳಿಸುತ್ತಲೇ ಕಾಂಗ್ರೆಸ್ ನಾಯಕರು ಸಿಹಿ ಹಂಚಿ ಸಂಭ್ರಮಿಸಿದರು. ಮಧ್ಯಾಹ್ನ ಆರಂಭವಾಗುವ ಸಂಸತ್ ಕಲಾಪಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ಟ್ವಿಟರ್ (X) ಬಯೋ ಬದಲು
ಇದನ್ನೂ ಓದಿ: Rahul Gandhi: 4 ತಿಂಗಳ ಬಳಿಕ ರಾಹುಲ್ ಗಾಂಧಿಗೆ ಮರಳಿದ ಸಂಸತ್ ಸದಸ್ಯತ್ವ; ಲೋಕಸಭೆ ಕಾರ್ಯಾಲಯ ಅಧಿಸೂಚನೆ
ರಾಹುಲ್ ಗಾಂಧಿ ಅವರು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, “ಮೋದಿ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರು” ಎಂದಿದ್ದರು. ಹಾಗಾಗಿ ಗುಜರಾತ್ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹಾಗಾಗಿ, ರಾಹುಲ್ ಗಾಂಧಿ ಅನರ್ಹರಾಗಿದ್ದರು. ಈಗ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಕಾರಣ ಅವರ ಅನರ್ಹತೆಯನ್ನು ರದ್ದುಗೊಳಿಸಲಾಗಿದೆ.