ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಲೇ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಈಗಾಗಲೇ ಕೇಂದ್ರ ಸರ್ಕಾರ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕೂಡ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಪರವಾಗಿ ಮಾತನಾಡಿದ್ದಾರೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸ್ಥಾನಮಾನ ನೀಡಲು ಸಕಲ ರೀತಿಯ ಅಧಿಕಾರ ಬಳಸುತ್ತದೆ” ಎಂದಿದ್ದಾರೆ.
ಕಣಿವೆಯಲ್ಲಿ ಭಾರತ್ ಜೋಡೋ ಯಾತ್ರೆಯ ಕೊನೆ ಹಂತದ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ, ಸೋಮವಾರ ಜಮ್ಮು-ಕಾಶ್ಮೀರ ಜನರ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಅವರು ರಾಜ್ಯ ಸ್ಥಾನಮಾನದ ಪರ ಮಾತನಾಡಿದರು. “ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗಬೇಕು ಎಂಬುದು ಜನರ ಬೇಡಿಕೆಯಾಗಿದೆ. ಜನರ ಬೇಡಿಕೆ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ” ಎಂದರು.
“ಜಮ್ಮು-ಕಾಶ್ಮೀರದಲ್ಲಿ ದೇಶದಲ್ಲೇ ಅತಿ ಹೆಚ್ಚು ನಿರುದ್ಯೋಗವಿದೆ. ಹಾಗಾಗಿ, ಕಣಿವೆಯ ಜನರ ಹಿತಾಸಕ್ತಿಯನ್ನು ಕಾಂಗ್ರೆಸ್ ಕಾಪಾಡುತ್ತದೆ. ಅಧಿಕಾರಕ್ಕೆ ಬಂದರೆ ರಾಜ್ಯ ಸ್ಥಾನಮಾನ ನೀಡುವ ಕುರಿತು ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುತ್ತದೆ” ಎಂದು ತಿಳಿಸಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಿದೆ.
ಇದನ್ನೂ ಓದಿ | Rahul Gandhi | ರಾಹುಲ್ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್ ಅಬ್ದುಲ್ಲಾ