ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣೆ ರ‍್ಯಾಲಿ, ಭಾಷಣ, ರಾಜಕೀಯದ ಆಚೆಗೂ ಹತ್ತಾರು ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಅವರಿಗೆ ಮಾರ್ಷಲ್ ಆರ್ಟ್ಸ್ ಗೊತ್ತು. ವಿವಿಧ ಬಗೆಯ ತಿನಿಸುಗಳನ್ನು ಮೆಲ್ಲುವುದು, ಜನರೊಂದಿಗೆ ಬೆರೆಯುವುದು ಸೇರಿ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರು ಪೆಟ್ಸ್ ಪ್ರಿಯರೂ ಆಗಿದ್ದು, ಗೋವಾದಿಂದ ಜಾಕ್ ರಸೆಲ್ ಟೆರಿಯರ್ (Jack Russell Terrier) ತಳಿಯ ಮುದ್ದಾದ ಪಪ್ಪಿಯನ್ನು ಮನೆಗೆ ತಂದಿದ್ದಾರೆ.
ಹೌದು, ಇತ್ತೀಚೆಗೆ ರಾಹುಲ್ ಗಾಂಧಿ ಅವರಿಗೆ ಮುದ್ದಾದ ಪಪ್ಪಿಯನ್ನು ಸಾಕುವ ಮನಸ್ಸಾಗಿದೆ. ಅದರಲ್ಲೂ, ಗಿಡ್ಡ ಕಾಲುಗಳುಳ್ಳ ಜಾಕ್ ರಸೆಲ್ ಟೆರಿಯರ್ ಶ್ವಾನವನ್ನು ಸಾಕುವ ನಿರ್ಧಾರ ಮಾಡಿದ್ದಾರೆ. ಕೊನೆಗೆ ಆ ತಳಿಯ ಶ್ವಾನವು ಗೋವಾದಲ್ಲಿದೆ ಎಂಬುದು ರಾಹುಲ್ ಗಾಂಧಿ ಅವರಿಗೆ ಗೊತ್ತಾಗಿದೆ. ಇದಕ್ಕಾಗಿ ಅವರು ಕಳೆದ ಗುರುವಾರ (ಆಗಸ್ಟ್ 4) ದೆಹಲಿಯಿಂದ ಗೋವಾಗೆ ತೆರಳಿ, ಗೋವಾದಿಂದ ಆ ಶ್ವಾನವನ್ನು ದೆಹಲಿಗೆ ತಂದಿದ್ದಾರೆ. ಇದರಿಂದ ಅವರು ಪೆಟ್‌ಗಳ ಮೇಲೆ ಎಂತಹ ಪ್ರೀತಿ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ.
ಪೆಟ್ ಜತೆ ರಾಹುಲ್ ಗಾಂಧಿ
ಉತ್ತರ ಗೋವಾದ ಮಪುಸಾದಲ್ಲಿ ಶ್ರಾವಣಿ ಪಿತ್ರೆ ಹಾಗೂ ಅವರ ಪತಿ ಸ್ಟ್ಯಾನ್ಲೆ ಬ್ರಗಂಕಾ ಅವರು ವಿವಿಧ ತಳಿಗಳ ಶ್ವಾನಗಳನ್ನು ಮಾರಾಟ (Dog Kennel) ಮಾಡುತ್ತಾರೆ. ಇವರ ಮನೆಗೆ ತೆರಳಿದ ರಾಹುಲ್ ಗಾಂಧಿ ಅವರು ಮೂರು ತಿಂಗಳ ವಯಸ್ಸಿನ ಜಾಕ್ ರಸೆಲ್ ಟೆರಿಯರ್ ಪಪ್ಪಿಯನ್ನು ತೆಗೆದುಕೊಂಡು ದೆಹಲಿಗೆ ತೆರಳಿದ್ದಾರೆ. ಶ್ರಾವಣಿ ಪಿತ್ರೆ ಹಾಗೂ ಸ್ಟ್ಯಾನ್ಲೆ ಬ್ರಗಂಕಾ ಮತ್ತು ಶ್ವಾನಗಳ ಜತೆ ರಾಹುಲ್ ಗಾಂಧಿ ನಿಂತಿರುವ ಫೋಟೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಯ ಮದುವೆ ಮಾಡಿ; ರೈತ ಮಹಿಳೆ ಸಲಹೆಗೆ ಸೋನಿಯಾ ಗಾಂಧಿ ಹೇಳಿದ್ದೇನು?
“ರಾಹುಲ್ ಗಾಂಧಿ ಕಚೇರಿಯಿಂದ ನಮಗೆ ದೂರವಾಣಿ ಕರೆ ಬಂತು. ಜಾಕ್ ರಸೆಲ್ ಟೆರಿಯರ್ ಪಪ್ಪಿ ಇದೆಯೇ ಎಂಬುದಾಗಿ ಕೇಳಿದರು. ಇದೆ ಎಂದು ನಾವು ತಿಳಿಸಿದೆವು. ಆದರೆ, ರಾಹುಲ್ ಗಾಂಧಿ ಅವರೇ ನಮ್ಮ ಬಳಿ ಬಂದು ಪಪ್ಪಿಯನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿ ನಾವು ಭಾವಿಸಿರಲಿಲ್ಲ. ಅವರು ಎರಡು ಪಪ್ಪಿ ಕೇಳಿದ್ದಾರೆ. ಈಗ ಒಂದು ಕೊಟ್ಟಿದ್ದೇವೆ. ಇನ್ನೊಂದನ್ನು ಶೀಘ್ರದಲ್ಲೇ ಕಳುಹಿಸುತ್ತೇವೆ” ಎಂದು ಶ್ರಾವಣಿ ಪಿತ್ರೆ ತಿಳಿಸಿದ್ದಾರೆ.