Site icon Vistara News

Rahul Gandhi: ಮುಸ್ಲಿಂ ಲೀಗ್‌ ಜಾತ್ಯತೀತ ಎಂದ ರಾಹುಲ್‌ ಗಾಂಧಿ; ಬಿಜೆಪಿ- ಕಾಂಗ್ರೆಸ್‌ ಮಧ್ಯೆ ವಾಕ್ಸಮರ

Rahul Gandhi Says Muslim League Is A Secular Party

Rahul Gandhi calls Muslim League secular: War of Words Between Congress And BJP

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರತಿ ಬಾರಿ ವಿದೇಶಕ್ಕೆ ಹೋಗಿ ನೀಡುವ ಹೇಳಿಕೆಗಳು ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ವಾಕ್ಸಮರಕ್ಕೆ ಕಾರಣವಾಗುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, “ಇಂಡಿಯನ್‌ ಯುನಿಯನ್‌ ಆಫ್‌ ಮುಸ್ಲಿಂ ಲೀಗ್‌ ಪಕ್ಷವು ಸಂಪೂರ್ಣವಾಗಿ ಜಾತ್ಯತೀತವಾಗಿದೆ” ಎಂದು ವಾಷಿಂಗ್ಟನ್‌ನಲ್ಲಿ ರಾಹುಲ್‌ ಗಾಂಧಿ ಹೇಳಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ವಾಷಿಂಗ್ಟನ್‌ನ ನ್ಯಾಷನಲ್‌ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ, ಮುಸ್ಲಿಂ ಲೀಗ್‌ ಪಕ್ಷದ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. “ಮುಸ್ಲಿಂ ಲೀಗ್‌ ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ. ಅದರಲ್ಲಿ, ಜಾತ್ಯತೀತ ರಹಿತ ಅಂಶವಿಲ್ಲ. ನನಗೆ ಪ್ರಶ್ನೆ ಕಳುಹಿಸಿದವರು ಮುಸ್ಲಿಂ ಲೀಗ್‌ ಬಗ್ಗೆ ಅಧ್ಯಯನ ಮಾಡಿದಂತಿಲ್ಲ” ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಬಿಜೆಪಿ ವಾಗ್ದಾಳಿ

ರಾಹುಲ್‌ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. “ಮುಸ್ಲಿಂ ಲೀಗ್‌ ಜಾತ್ಯತೀತ ಪಕ್ಷವೇ? ಧರ್ಮದ ಆಧಾರದ ಮೇಲೆ ದೇಶವನ್ನು ಇಬ್ಭಾಗ ಮಾಡಿದ ಪಕ್ಷವು ಜಾತ್ಯತೀತವೇ? ಭಾರತದಲ್ಲಿ ಮುಸ್ಲಿಂ ಲೀಗ್‌ ಪಕ್ಷವನ್ನು ಜಾತ್ಯತೀತ ಎಂಬುದಾಗಿ ನಂಬುವವರು ಈಗಲೂ ಇದ್ದಾರೆ ಎಂಬುದೇ ದುರದೃಷ್ಟ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌, ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ಸೇರಿ ಹಲವರು ಟೀಕಿಸಿದ್ದಾರೆ.

ತಿರುಗೇಟು ನೀಡಿದ ಕಾಂಗ್ರೆಸ್‌

ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. “ಅಮಿತ್‌ ಮಾಳವೀಯ ಅವರೇ ನೀವೇನು ಅನಕ್ಷರಸ್ಥರೇ? ಕೇರಳ ಮುಸ್ಲಿಂ ಲೀಗ್‌ಗೂ, ಜಿನ್ನಾ ಮುಸ್ಲಿಂ ಲೀಗ್‌ಗೂ ವ್ಯತ್ಯಾಸವೇ ಗೊತ್ತಿಲವೇ” ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪೂರ್ವಜರು ಮೈತ್ರಿ ಮಾಡಿಕೊಂಡ ಪಕ್ಷ ಎಂದರೆ ಅದು ಮುಸ್ಲಿಂ ಲೀಗ್‌. ಮತ್ತೊಂದು ಮುಸ್ಲಿಂ ಲೀಗ್‌ ಎಂದರೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಪಕ್ಷ” ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಅನರ್ಹನಾದ ಬಳಿಕವೇ ನನಗೆ ಹೆಚ್ಚುಅವಕಾಶ: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಹೇಳಿಕೆ

ಬಿಜೆಪಿ ಅಂತ್ಯ ಖಚಿತ ಎಂದ ರಾಹುಲ್‌ ಗಾಂಧಿ

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆಯೂ ಮಾತನಾಡಿದ್ದಾರೆ. “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಅಂತ್ಯವೇ ಇಲ್ಲ ಎಂಬ ನಂಬಿಕೆ ಇದೆ. ಆದರೆ, ಮುಂದಿನ ಮೂರ್ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ನಾಶವಾಗಲಿದೆ” ಎಂದು ಕಾಂಗ್ರೆಸ್‌ ನಾಯಕ ತಿಳಿಸಿದ್ದಾರೆ.

ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version