ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇತೃತ್ವದ ಸಂಸದೀಯ ಸಲಹಾ ಸಮಿತಿ ಸಭೆಯಲ್ಲಿ ನಡೆದಿದ್ದು, ಸದಸ್ಯರಾಗಿರುವ ರಾಹುಲ್ ಗಾಂಧಿ(Rahul Gandhi) ಅವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಅವರು, ಲಂಡನ್‌ನಲ್ಲಿ ತಮ್ಮ ಭಾಷಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆಂದು ತಿಳಿದು ಬಂದಿದೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆಯಷ್ಟೇ, ಅದನ್ನೇ ಭಾರತ ವಿರೋಧಿ ಎಂದು ಹಣೆಪಟ್ಟಿ ಕಟ್ಟುವಂತಿಲ್ಲ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ, ಬೇರೆ ಯಾವುದೇ ದೇಶ ಮಧ್ಯ ಪ್ರವೇಶಿಸಬೇಕೆಂದು ಹೇಳಿಲ್ಲ ಎಂದು ರಾಹುಲ್ ಹೇಳಿದರು ಎನ್ನಲಾಗಿದೆ.
ಸಮಿತಿ ಸಭೆಯಲ್ಲಿ ಹಾಜರಿದ್ದ ನಾಯಕರಿಗೆ ಸ್ಪಷ್ಟನೆ ನೀಡಿದ ರಾಹುಲ್ ಗಾಂಧಿ ಅವರು, ಭಾರತೀಯ ಪ್ರಜಾಪ್ರಭುತ್ವ ಸಮಸ್ಯೆಯು ಆಂತರಿಕವಾಗಿದ್ದು, ಅದನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾಗಿಯೂ ಹೇಳಿದ್ದಾರೆ. ಜಿ20 ಅಧ್ಯಕ್ಷತೆಯ ಕುರಿತು ಚರ್ಚಿಸಲು ಈ ವಿದೇಶಾಂಗ ಸಂಸದೀಯ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಈ ಸಮಿತಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೇರ್ಮನ್ನರಾಗಿದ್ದು, ರಾಹುಲ್ ಗಾಂಧಿ ಅವರು ಸದಸ್ಯರಾಗಿದ್ದಾರೆ. ಸಭೆಯ ಆರಂಭದಲ್ಲಿ ಜಿ20 ಅಧ್ಯಕ್ಷತೆಯ ಕುರಿತು ಸಚಿವರು ವಿವರವಾದ ಮಾಹಿತಿಯನ್ನು ಒದಗಿಸಿದರು.
ಸಭೆಯ ಆರಂಭದ ಸುತ್ತಿನಲ್ಲಿ ರಾಹುಲ್ ಗಾಂಧಿ ಅವರು ಏನೂ ಮಾತನಾಡಿರಲಿಲ್ಲ. ವಿದೇಶಿ ನೆಲದಲ್ಲಿ ರಾಜಕೀಯನ ನಾಯಕರು ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ, ಮೈಲೇಜ್ ಪಡೆದುಕೊಳ್ಳುತ್ತಿದ್ದಾರೆಂದು ಸಂಸದರೊಬ್ಬರು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದರು ಎಂದು ತಿಳಿದು ಬಂದಿದೆ.
ಇಂಥ ವಿಷಯದ ಬಗ್ಗೆ ಮಾತನಾಡಲು ಇದು ಸೂಕ್ತ ವೇದಿಕೆಯಲ್ಲ ಎಂದು ಗಾಂಧಿ ಅವರ ಟೀಕೆಗಳಿಗೆ ಬಿಜೆಪಿ ಸಂಸದರು ತಿರುಗೇಟು ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಇತರ ಕೆಲವು ಸಂಸದರು ಸಹ ಬಿಜೆಪಿ ಸಂಸದರು ಮಂಡಿಸಿದ ವಾದವನ್ನು ಬೆಂಬಲಿಸಿದರು. ಆದರೆ, ಪ್ರತಿಪಕ್ಷದ ಸಂಸದರು, ರಾಹುಲ್ ಗಾಂಧಿ ಅವರಿಗೆ ಸ್ಪಷ್ಟನೆ ನೀಡುವ ಹಕ್ಕಿದೆ ಎಂದು ಅವರನ್ನು ಬೆಂಬಲಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Delhi Police: ರಾಹುಲ್ ಗಾಂಧಿ ಮನೆಗೆ ದಿಲ್ಲಿ ಪೊಲೀಸ್, ರೇಪ್ ಸಂತ್ರಸ್ತೆ ಮಾಹಿತಿ ಕೋರಿಕೆ
ಸಭೆಯಲ್ಲಿ ತೀವ್ರ ವಾದ-ವಿವಾದ ಜೋರಾಗುತ್ತಿದ್ದಂತೆ ಸಮಿತಿಯ ಚೇರ್ಮನ್ನರಾದ ಎಸ್ ಜೈಶಂಕರ್ ಅವರು ಮಧ್ಯಪ್ರವೇಶಿಸಿ, ಪ್ರತಿಕ್ರಿಯೆ ನೀಡದಂತೆ ರಾಹುಲ್ ಗಾಂಧಿ ಅವರನ್ನು ತಡೆದರು. ಅಲ್ಲದೇ, ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡುವಂತೆ ಉಳಿದ ಸಂಸದರಿಗೂ ತಿಳಿಸಿದರು.