ನವದೆಹಲಿ: ಎಲ್ಲ ಕಳ್ಳರ ಸರ್ನೇಮ್ ಮೋದಿ ಎಂದೇ ಇರುತ್ತದೆ ಎಂದು 2019ರ ಚುನಾವಣೆಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi Disqualified)ಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಅವರನ್ನು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಮಾ.23ರಂದು ಗುಜರಾತ್ನ ಸೂರತ್ ಕೋರ್ಟ್ ತೀರ್ಪು ನೀಡಿತ್ತು. ಹಾಗಾಗಿ, ಅವರು ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದು, ಉನ್ನತ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ತೀರ್ಪು ನೀಡದಿದ್ದರೆ ಅವರಿಗೆ ಜೈಲೇ ಗತಿಯಾಗಲಿದೆ.
ರಾಹುಲ್ ಗಾಂಧಿ ಮಾತ್ರವಲ್ಲ, ದೇಶದಲ್ಲಿ ಹಲವು ನಾಯಕರು ಮಾನಹಾನಿ, ಅಪರಾಧ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ಪ್ರಕಟವಾದ ಕಾರಣ ಅವರು ಸಂಸತ್ ಹಾಗೂ ವಿಧಾನಸಭೆಯಿಂದ ಅನರ್ಹಗೊಂಡಿದ್ದಾರೆ. ಹಾಗಾದರೆ, ಭಾರತದಲ್ಲಿ ಅನರ್ಹಗೊಂಡ ರಾಜಕಾರಣಿಗಳು ಯಾರು? ಅವರ ವಿರುದ್ಧದ ಪ್ರಕರಣಗಳು ಯಾವವು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಜಯಲಲಿತಾ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು 2014ರಲ್ಲಿ ತಮಿಳುನಾಡು ವಿಧಾನಸಭೆಯಿಂದ ಅನರ್ಹಗೊಂಡಿದ್ದರು. ಸುಮಾರು 66 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬೆಂಗಳೂರು ಕೋರ್ಟ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಒಂದು ವರ್ಷದ ಬಳಿಕ ಕರ್ನಾಟಕ ಹೈಕೋರ್ಟ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದ ಬಳಿಕ ಜಯಲಲಿತಾ ನಿರಾಳರಾಗಿದ್ದಾರೆ.
ಲಾಲು ಪ್ರಸಾದ್ ಯಾದವ್
ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು 2013ರಲ್ಲಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. 970 ಕೋಟಿ ರೂ. ಮೇವು ಹಗರಣದಲ್ಲಿ ನ್ಯಾಯಾಲಯವು ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕಾರಣ ಅನರ್ಹಗೊಂಡಿದ್ದರು. ಇದಾದ ಬಳಿಕವೂ ಹಲವು ಕೇಸ್‌ಗಳಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯಾಗಿದೆ.
ರಶೀದ್ ಮಸೂದ್
ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡುತ್ತಲೇ ಜನಪ್ರತಿನಿಧಿಗಳು ಅನರ್ಹ ಎಂಬುದಾಗಿ 2013ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಅನರ್ಹಗೊಂಡ ಮೊದಲ ಜನಪ್ರತಿನಿಧಿ ರಶೀದ್ ಮಸೂದ್ ಆಗಿದ್ದಾರೆ. ಇವರು ಎಂಬಿಬಿಎಸ್ ಸೀಟು ಹಗರಣದಲ್ಲಿ ನ್ಯಾಯಾಲಯವು 2013ರ ಅಕ್ಟೋಬರ್‌ನಲ್ಲಿ ರಾಜ್ಯಸಭೆ ಕಾಂಗ್ರೆಸ್ ಸದಸ್ಯ ರಶೀದ್ ಮಸೂದ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ ಕಾರಣ ಅವರು ಮೇಲ್ಮನೆಯಿಂದ ಅನರ್ಹಗೊಂಡಿದ್ದರು.
ಅಜಂ ಖಾನ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 2019ರಲ್ಲಿ ಮಾಡಿದ ದ್ವೇಷ ಭಾಷಣ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
ದ್ವೇಷ ಭಾಷಣದ ಕುರಿತು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಪಿ-ಎಂಎಲ್‌ಎ ನ್ಯಾಯಾಲಯವು ಅಜಂ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ ಅವರು ಅನರ್ಹಗೊಂಡಿದ್ದಾರೆ.
ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ಶಾಕ್; ಸಂಸದ ಸ್ಥಾನದಿಂದ ಅನರ್ಹ