ಸೂರತ್, ಗುಜರಾತ್: 2019ರ ಮಾನಹಾನಿ ಪ್ರಕರಣ ಸಂಬಂಧ ನೀಡಲಾಗಿದ್ದ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೂರತ್‌ನ ಸೆಷನ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಕಳ ಹಂತದ ನ್ಯಾಯಾಲಯವು ನೀಡಿದ್ದ 2 ವರ್ಷದ ಶಿಕ್ಷೆಗೆ ಸೆಷನ್ ಕೋರ್ಟ್ ತಡೆ ನೀಡಿದೆ. ಅಲ್ಲದೇ, ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ನಿಗದಿ ಪಡಿಸಿದೆ. ಶಿಕ್ಷೆಗೆ ತಡೆ ನೀಡಿದ್ದರಿಂದ ಕೇರಳದ ವಯನಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹತೆ ರದ್ದಾಗಲಿದೆಯೇ ಎಂಬ ಚರ್ಚೆಗಳು ನಡೆದಿವೆ.
ಸೂರತ್ ಕೋರ್ಟ್‌ಗೆ ಆಗಮಿಸಿದ ರಾಹುಲ್ ಗಾಂಧಿ ಅವರ ಜತೆಗೆ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖ್ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ತೀರದ ಸಂಕಷ್ಟ; ಆರ್ಎಸ್ಎಸ್ ಸ್ವಯಂ ಸೇವಕನಿಂದ ಹರಿದ್ವಾರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ
ಕೋರ್ಟ್‌ಗೆ ರಾಹುಲ್ ಗಾಂಧಿ ಅವರು ಸ್ವತಃ ಹಾಜರಾಗುವುದನ್ನು ಡ್ರಾಮಾ ಎಂದು ಬಿಜೆಪಿ ಟೀಕಿಸಿದೆ ಮತ್ತು ಇದೊಂದು ಚೈಲ್ಡೀಸ್ ನಡವಳಿಕೆ ಎಂದು ಹೇಳಿದೆ.
ಸತ್ಯವೇ ನನ್ನ ಶಸ್ತ್ರ ಎಂದ ರಾಹುಲ್ ಗಾಂಧಿ
ಸೂರತ್ ಸೆಷನ್ ಕೋರ್ಟ್‌ಗೆ ಹಾಜರಾದ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಸತ್ಯವೇ ತಮ್ಮ ಶಸ್ತ್ರ ಎಂದು ಹೇಳಿಕೊಂಡಿದ್ದಾರೆ. ಮಿತ್ರಕಾಲ್ ವಿರುದ್ಧ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಈ ಹೋರಾಟ ನಡೆದಿದೆ. ಈ ಸಂಘರ್ಷದಲ್ಲಿ ಸತ್ಯವೇ ನನ್ನ ಶಸ್ತ್ರ ಮತ್ತು ಸತ್ಯವೇ ನನ್ನ ಆಶ್ರಯವಾಗಿ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ
ಎಲ್ಲ ಕಳ್ಳರ ಸರ್ನೇಮ್ ಮೋದಿ ಎಂದೇ ಇರುತ್ತದೆ ಎಂದು 2019ರ ಚುನಾವಣೆಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಇತ್ತೀಚೆಗೆ ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಮಾ.23ರಂದು ಗುಜರಾತ್ನ ಸೂರತ್ ಕೋರ್ಟ್ ತೀರ್ಪು ನೀಡಿತ್ತು.
2019ರ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಚಾರ ಮಾಡುತ್ತ ‘ಎಲ್ಲ ಕಳ್ಳರ ಹೆಸರುಗಳ ಉಪನಾಮ ಮೋದಿ ಎಂದೇ ಇರುತ್ತದೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ನೀಡಿದ್ದರು. ಹಾಗೇ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾ.23ರಂದು ತೀರ್ಪು ನೀಡಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು. ಅಷ್ಟೇ ಅಲ್ಲ, 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. 30 ದಿನಗಳ ಜಾಮೀನು ನೀಡಿತ್ತು. ಅಷ್ಟರೊಳಗೆ ರಾಹುಲ್ ಗಾಂಧಿ ಪರ ಕಾಂಗ್ರೆಸ್ನ ಯಾರಾದರೂ ಮೇಲ್ಮನವಿ ಸಲ್ಲಿಸಿ, ಅವರಿಗೆ ನೀಡಿರುವ ಶಿಕ್ಷೆಯನ್ನು ರದ್ದುಗೊಳಿಸಬಹುದು ಎಂದು ಹೇಳಿತ್ತು. ಆದರೆ ಕೋರ್ಟ್ನ ಈ ಪ್ರಕ್ರಿಯೆಗೂ, ಲೋಕಸಭೆಯ ನಿಯಮಗಳಿಗೂ ಸಂಬಂಧವಿಲ್ಲ. ಲೋಕಸಭೆ ಈಗ ತನ್ನ ಪ್ರಕ್ರಿಯೆ ಮಾಡಿದೆ.
‘ಮಾರ್ಚ್ 23ರಂದು ರಾಹುಲ್ ಗಾಂಧಿಯನ್ನು ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ಜನಪ್ರತಿನಿಧಿಗಳ ಕಾಯ್ದೆ 1951ರ, ಆರ್ಟಿಕಲ್ 102 (1) (e)yಯ ನಿಬಂಧನೆಗಳಡಿ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಹೇಳಿದೆ.