ನವ ದೆಹಲಿ: ಬುಧವಾರ (ಅಕ್ಟೋಬರ್ 4) ವಿಶ್ವ ಪ್ರಾಣಿಗಳ ದಿನದ ಅಂಗವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಕುಟುಂಬದ ಹೊಸ ಸದಸ್ಯೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ. ತಾಯಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಉಡುಗೊರೆಯಾಗಿ ಶ್ವಾನದ ಮರಿಯನ್ನು ನೀಡಿದರು. ಆ ಶ್ವಾನದ ಮರಿಯ ಹೆಸರು ನೂರಿ (Noorie). ಗೋವಾದಿಂದ ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ತಂದ ಜಾಕ್ ರಸೆಲ್ ಟೆರಿಯರ್ ತಳಿಯ ಶ್ವಾನದ ಮರಿಯೇ ಈ ನೂರಿ. ಇದನ್ನು ರಾಹುಲ್ ಗಾಂಧಿ ಪರಿಚಯಿಸಿದರು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಗೋವಾ ಪ್ರವಾಸದ ವಿಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಅಲ್ಲಿ ನೂರಿಯನ್ನು ಭೇಟಿಯಾಗಿದ್ದು, ಬಳಿಕ ತಾಯಿಗೆ ತಲುಪಿಸಿದ್ದನ್ನು ವಿವರಿಸಿದ್ದಾರೆ. ಪ್ರಯಾಣದ ಮಧ್ಯೆ ಮೆಟ್ರೋ ರೈಲಿನಲ್ಲೂ ರಾಹುಲ್ ಗಾಂಧಿ ಸಂಚರಿಸಿದ್ದು ಈ ದೃಶ್ಯವೂ ವಿಡಿಯೊದಲ್ಲಿ ಕಂಡು ಬಂದಿದೆ.
ನೂರಿಯನ್ನು ನೋಡಿ ಸೋನಿಯಾ ಗಾಂಧಿ ಅಚ್ಚರಿಗೊಳಗಾದರು. ಬಳಿಕ ಅದನ್ನು ಎತ್ತಿ ಮುದ್ದಾಡಿದರು. ರಾಹುಲ್ ಗಾಂಧಿ ಆಗಸ್ಟ್‌ನಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲೇ ಅವರಿಗೆ ಈ ಜಾಕ್ ರಸೆಲ್ ಟೆರಿಯರ್ ಶ್ವಾನದ ತಳಿ ಸಿಕ್ಕಿದೆ ಎಂದು ವರದಿಯಾಗಿದೆ. ಗೋವಾ ಮೂಲದ ಶ್ವಾನ ಸಾಕಣೆದಾರರಾದ ಶರ್ವಾನಿ ಪಿಟ್ರೆ ಮತ್ತು ಪತಿ ಸ್ಟಾನ್ಲಿ ಬ್ರಾಗಾಂಕಾ ಅವರನ್ನು ರಾಹುಲ್ ಗಾಂಧಿ ಖಾಸಗಿಯಾಗಿ ಭೇಟಿಯಾಗಿದ್ದರು. ಜ್ಯಾಕ್ ರಸೆಲ್ ಟೆರಿಯರ್‌ಗಳನ್ನು ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿ ಕಚೇರಿಯಿಂದ ಕರೆ ಬಂದಿದೆ ಎಂದು ಶರ್ವಾನಿ ಪಿಟ್ರೆ ಈ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ: Viral Video: ಕಡಲ ತೀರಕ್ಕೆ ಬಂತು ತಿಮಿಂಗಿಲ ಶವ; ಹತ್ತಿರ ಹೋಗಬೇಡಿ ಬ್ಲಾಸ್ಟ್ ಆಗತ್ತೆ ಎಂದ ನೆಟ್ಟಿಗರು
ರಾಹುಲ್ ಗಾಂಧಿಯ ಮೆಟ್ರೋ ಪ್ರಯಾಣ
ಮೆಟ್ರೋ ಪ್ರಯಾಣದ ವೇಳೆ ರಾಹುಲ್ ಗಾಂಧಿ ತಮ್ಮ ಸಹ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ಅವರು ಮನೆಗೆ ತಲುಪುತ್ತಿದ್ದಂತೆ ನೂರಿಯನ್ನು ಹೊರಗೆ ನಿಲ್ಲಿಸಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರಲ್ಲಿ ಉಡುಗೊರೆಯನ್ನು ನೋಡುವಂತೆ ತಿಳಿಸಿದರು. ಆರಂಭದಲ್ಲಿ ಹಿಂಜರಿದ ಸೋನಿಯಾ ಗಾಂಧಿ ನಂತರ ಹೊರಬಂದು ನೂರಿಯನ್ನು ಕೈಗೆತ್ತಿಕೊಂಡರು. ನೂರಿ ಇಲ್ಲಿಗೆ ತಲುಪಲು ಸುಮಾರು 2-3 ಗಂಟೆಗಳ ಪ್ರಯಾಣ ಮಾಡಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಉತ್ತಮ ಉಡುಗೊರೆಗಾಗಿ ಸೋನಿಯಾ ಗಾಂಧಿ ಮಗನಿಗೆ ಧನ್ಯವಾದ ತಿಳಿಸಿದರು. ಮನೆಯ ವಾತಾವರಣಕ್ಕೆ ಹೊಂದಿಕೊಂಡ ನೂರಿ ಇತರ ನಾಯಿಯೊಂದಿಗೆ ಬೆರೆತು ಆಟವಾಡುವ ದೃಶ್ಯ ಸೆರೆಯಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.