ರಾಯ್ಪುರ, ಛತ್ತೀಸ್‌ಗಢ: ರಾಹುಲ್ ಗಾಂಧಿ (Rahul Gandhi) ಅವರು ಆಧುನಿಕ ಭಾರತದ ಮಹಾತ್ಮ ಗಾಂಧಿ (Mahatma Gandhi) ಎಂದು ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಅವರು ಗುರುವಾರ ರಾಯ್ಪುರದಲ್ಲಿ ಹೇಳಿದ್ದಾರೆ. 2018ರ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಛತ್ತೀಸ್‌ಗಢನ ಅಮಿತೇಶ್ ಶುಕ್ಲಾ ಅವರು, ರಾಹಲ್ ಗಾಂಧಿಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೊಂದಿಗೆ ಹೋಲಿಕೆ ಮಾಡುವ ಮೂಲಕ, ವಿವಾದಕ್ಕೆ ಕಾರಣವಾಗಿದ್ದಾರೆ. ಏತನ್ಮಧ್ಯೆ, ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದುವರಿಸಿದೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶುಕ್ಲಾ ಅವರು, ರಾಹುಲ್ ಗಾಂಧಿ ಅವರು ಆಧುನಿಕ ಭಾರತದ ಮಹಾತ್ಮ ಗಾಂಧಿಯಾಗಿದ್ದಾರೆ. ರಾಹುಲ್ ಮತ್ತು ಮಹಾತ್ಮ ಗಾಂಧಿ ಮಧ್ಯೆ ಸಾಕಷ್ಟು ಹೋಲಿಕೆಗಳಿವೆ. ಮಹಾತ್ಮ ಗಾಂಧಿ ಅವರು ಆಗ ದಂಡಿ ಪಾದಯಾತ್ರೆ ಮಾಡಿದ್ದರು. ಈಗ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ ಎಂದು ಅವರು ಹೇಳಿದರು. ಅಲ್ಲದೇ, ರಾಹುಲ್ ಗಾಂಧಿ ಅವರನ್ನು ಶುಕ್ಲಾ ರಾಷ್ಟ್ರ ಪುತ್ರ ಎಂದು ಕರೆದರು.
ನಾನು ಈ ಹೇಳಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನೀಡಿದ್ದೇನೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವನು. ನನ್ನ ತಂದೆ (ಅವಿಭಜಿತ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ಯಾಮ ಚರಣ್ ಶುಕ್ಲಾ) ಮತ್ತು ಚಿಕ್ಕಪ್ಪ (ಹಿರಿಯ ಕಾಂಗ್ರೆಸ್ ನಾಯಕ ವಿದ್ಯಾ ಚರಣ್) ಅವರಿಂದ ನಾನು ಮಹಾತ್ಮ ಗಾಂಧಿ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ಕೇಳಿದ್ದೇನೆ. ಹಾಗಾಗಿ, ರಾಹುಲ್ ಮತ್ತು ಮಹಾತ್ಮ ಗಾಂಧಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಮಹಾತ್ಮ ಗಾಂಧಿ ಅವರು ಮನಸ್ಸು ಮಾಡಿದರೆ ದೇಶದ ಮೊದಲ ಪ್ರಧಾನಿಯಾಗಬಹುದು. ಆದರೆ, ಅವರು ಅಧಿಕಾರ ತ್ಯಜಿಸಿದರು. ಅದೇ ರೀತಿ, ರಾಹುಲ್ ಗಾಂಧಿ ಅವರು ಮನಸ್ಸು ಮಾಡಿದ್ದರೆ 2004 ಮತ್ತು 2008ರಲ್ಲಿ ಪ್ರಧಾನಿಯಾಗಬಹುದಿತ್ತು. ಆದರೆ, ಅವರೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಮಹಾತ್ಮ ಗಾಂಧಿ ರೀತಿಯಲ್ಲೇ ರಾಹುಲ್ ಗಾಂಧಿ ಅವರು ಸಾವಿರಾರು ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಮಹಾತ್ಮ ಗಾಂಧಿ ದಂಡಿ ಯಾತ್ರೆ ಕೈಗೊಂಡರೆ, ರಾಹುಲ್ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: 2019ರ ಮಾನಹಾನಿ ಕೇಸ್: ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ, ಸಂಸತ್ ಸದಸ್ಯತ್ವ ಮರಳುತ್ತಾ?
ಛತ್ತೀಸ್‌ಗಢ ಶಾಸಕ ಅಮಿತೇಶ್ ಶುಕ್ಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂತೋಷ್ ಪಾಂಡೆ ಅವರು, ಛತ್ತೀಸ್‌ಗಢ ಕಾಂಗ್ರೆಸ್ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ದಿವಾಳಿಯಾಗಿ ಎಂದು ಹೇಳಿದ್ದಾರೆ.