ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಪ್ಪು ಅಲ್ಲ, ಅವರೊಬ್ಬ ಸ್ಮಾರ್ಟ್ ವ್ಯಕ್ತಿ ಎಂದು ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಅವರು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು, ರಾಹುಲ್ ಅವರನ್ನು ಪಪ್ಪು ಎಂದು ಬಿಂಬಿಸಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ರಘುರಾಮ್ ರಾಜನ್ ಅವರು ಭಾರತ್ ಜೋಡೋ ಯಾತ್ರೆಯಲ್ಲೂ ಪಾಲ್ಗೊಂಡಿದ್ದರು.
ದಾವೋಸ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಸಂದರ್ಭದಲ್ಲೂ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದ ರಘುರಾಮ್ ರಾಜನ್ ಅವರು, ನಾನು ಬಹಳ ಹತ್ತಿರದಿಂದ ರಾಹುಲ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾನು ಹಲವು ವರ್ಷಗಳಿಂದ ಅವರನ್ನು ಬಲ್ಲೆ. ರಾಹುಲ್ ಯಾವುದೇ ರೀತಿಯಲ್ಲೂ ಪಪ್ಪು ಅಲ್ಲ. ತಮ್ಮ ಆದ್ಯತೆಗಳೇನು, ತಮಗಿರುವ ಸಾಮರ್ಥ್ಯಗಳೇನು ಎಂಬ ಬಗ್ಗೆ ಸ್ಪಷ್ಟವಾಗಿ ಅವರಿಗೆ ಗೊತ್ತಿದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರನ್ನು ಅವರ ರಾಜಕೀಯ ವಿರೋಧಿಗಳು ಪಪ್ಪು ಎಂದು ಕರೆಯುತ್ತಾರೆ. ವಿಶೇಷವಾಗಿ ಭಾರತೀಯ ಜನತಾ ಪಾರ್ಟಿಯೂ ಪ್ರತಿ ಹಂತದಲ್ಲಿ ಅವರನ್ನು ಪಪ್ಪು ಎಂಬುದನ್ನು ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿರುತ್ತಿದೆ. ಈ ವಿಷಯವನ್ನು ಇತ್ತೀಚೆಗೆ ರಾಹುಲ್ ಗಾಂಧಿ ಅವರು ಹೇಳಿಕೊಂಡಿದ್ದರು. ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ | ಭಾರತ್ ಜೋಡೋ ಯಾತ್ರೆಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಾಥ್; ರಾಹುಲ್ ಗಾಂಧಿಯೊಂದಿಗೆ ಕಾಲ್ನಡಿಗೆ