Site icon Vistara News

Rahul Gandhi: ಶಿಕ್ಷೆ ಪ್ರಶ್ನಿಸಿ ಕೋರ್ಟ್‌ಗೆ ನಾಳೆ ಮೊರೆ ಹೋಗಲಿದ್ದಾರೆ ರಾಹುಲ್ ಗಾಂಧಿ

Rahul Gandhi to visit Karnataka on April 16, 17, Jai Bharat rally launched in Kolar

ರಾಹುಲ್‌ ಗಾಂಧಿ

ನವದೆಹಲಿ: 2019ರ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ, ತೀರ್ಪು ನೀಡಿತ್ತು. ರಾಹುಲ್ ಗಾಂಧಿ ಅವರು ಸೆಷನ್ಸ್ ಕೋರ್ಟ್‌ನಲ್ಲಿ ಈ ಆದೇಶವನ್ನು ಸೋಮವಾರ ಪ್ರಶ್ನಿಸಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ. 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಅವರು ಲೋಕಸಭೆ ಸದಸ್ಯತ್ವ ಕೂಡ ರದ್ದಾಗಿದೆ. ಕೇರಳದ ವಯನಾಡ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದರು.

ಮಾನಹಾನಿ ಪ್ರಕರಣದಲ್ಲಿ ತಮ್ಮ ವಿರುದ್ಧ ನೀಡಲಾಗಿರುವ ಜೈಲುಶಿಕ್ಷೆಯನ್ನು ರದ್ದು ಮಾಡುವಂತೆ ಕೋರಿ ರಾಹುಲ್ ಗಾಂಧಿ ಅವರು ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ, ಪ್ರಕರಣದ ವಿಚಾರಣೆ ಮುಗಿಯುವರೆಗೂ ಶಿಕ್ಷೆಗೆ ಮಧ್ಯಂತರ ತಡೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆಂದು ತಿಳಿದು ಬಂದಿದೆ.

ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಯನ್ನು ವಿಧಿಸಿದ ಸೂರತ್ ನ್ಯಾಯಾಲಯವು ಜಾಮೀನು ನೀಡಿತ್ತಲ್ಲದೇ, ಮೇಲ್ಮನವಿ ಸಲ್ಲಿಸಲು ಅವಕಾಶ ಒದಗಿಸುವುದಕ್ಕಾಗಿ 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿತ್ತು. ಹೀಗಿದ್ದಾಗ್ಯೂ, ಲೋಕಸಭೆ ಕಾರ್ಯದರ್ಶಿಗಳು, ತಕ್ಷಣವೇ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿತ್ತು. ರಾಹುಲ್ ಗಾಂಧಿ ವಿರುದ್ಧ ಬುಲೆಟ್ ಟ್ರೈನ್ ಸ್ಪೀಡ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

2019ರಲ್ಲಿ ಕರ್ನಾಟಕದ ಕೋಲಾರ್‌ನ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಏಕೆ ಇರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕಾಗಿ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದರು. ಮೋದಿ ಸಮುದಾಯಕ್ಕೆ ಅವಮಾನವಾಗಿದೆ ಎಂದು ಗುಜರಾತ್‌ನ ಪೂರ್ಣೇಶ್ ಮೋದಿ ಅವರು ಸೂರತ್‌ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.

Rahul Gandhi: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ

ಬಿಜೆಪಿ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ರಾಹುಲ್ ಗಾಂಧಿ ವಿರುದ್ಧ ಬಿಹಾರ ಕೋರ್ಟ್​ನಲ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ (Rahul Gandhi defamation case) ಹೂಡಿದ್ದಾರೆ. ಈ ಸಂಬಂಧ ಏಪ್ರಿಲ್​ 12ರಂದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಬಿಹಾರ ಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.

2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿ ‘ಎಲ್ಲ ಕಳ್ಳರ ಸರ್​ನೇಮ್​ ಮೋದಿ ಎಂದೇ ಇರುತ್ತದೆ’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಮಾರ್ಚ್​ 23ರಂದು ತೀರ್ಪು ನೀಡಿದ ಸೂರತ್​ ಕೋರ್ಟ್​ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಹಾಗೇ, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ 30 ದಿನಗಳ ಜಾಮೀನು ಆಧಾರದ ಮೇಲೆ ರಾಹುಲ್ ಗಾಂಧಿ ಹೊರಗೆ ಇದ್ದಾರೆ. ಇನ್ನು 2 ವರ್ಷ ಜೈಲು ಶಿಕ್ಷೆ ಎಂದು ಕೋರ್ಟ್ ತೀರ್ಪು ನೀಡಿ 24ಗಂಟೆಯಲ್ಲಿ ಅವರ ಲೋಕಸಭೆ ಸದಸ್ಯತ್ವ ಸ್ಥಾನ ರದ್ದಾಗಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ತೀರದ ಸಂಕಷ್ಟ; ಆರ್​ಎಸ್​​ಎಸ್​​ ಸ್ವಯಂ ಸೇವಕನಿಂದ ಹರಿದ್ವಾರ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ​

ಇದೀಗ ಮೋದಿ ಉಪನಾಮಕ್ಕೆ ಮಾಡಿದ ಅವಹೇಳನದ ವಿಚಾರವಾಗಿಯೇ ಸುಶೀಲ್ ಮೋದಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುಶೀಲ್​ ಕುಮಾರ್ ಮೋದಿ, ಈ ಕೇಸ್​ನಲ್ಲಿ ಸಾಕ್ಷಿಗಳಾದ ಮಾಜಿ ಸಚಿವ ನಿತಿನ್​ ನವೀನ್​ (ಬಂಕಿಪುರ ಶಾಸಕ), ದಿಘಾ ಶಾಸಕ ಸಂಜೀವ್​ ಚೌರಾಸಿಯಾ, ಭಾರತೀಯ ಜನತಾ ಯುವ ಮೋರ್ಚಾ ಮುಖಂಡ ಮನೀಶ್ ಕುಮಾರ್​ ಅವರ ಹೇಳಿಕೆಗಳನ್ನು ಕೋರ್ಟ್​​ನಲ್ಲಿ ದಾಖಲು ಮಾಡಲಾಗಿದ್ದು, ರಾಹುಲ್ ಗಾಂಧಿಯವರು ಏಪ್ರಿಲ್​ 12ರಂದು ಕೋರ್ಟ್​ಗೆ ಭೇಟಿಕೊಟ್ಟು, ತಮ್ಮ ಹೇಳಿಕೆ ನೀಡಲಿದ್ದಾರೆ. ಅಡಿಷನಲ್​ ಚೀಫ್​ ಜ್ಯೂಡಿಶಿಯಲ್​ ಮ್ಯಾಜಿಸ್ಟ್ರೇಟ್​ ಆದಿ ದೇವ್​ ಅವರು ಕೇಸ್​ ವಿಚಾರಣೆ ನಡೆಸಲಿದ್ದು, ಸುಶೀಲ್​ ಮೋದಿ ಪರ ವಕೀಲರಾದ ಎಸ್​. ಡಿ.ಸಂಜಯ್​ ವಾದಿಸಲಿದ್ದಾರೆ.

Exit mobile version