Site icon Vistara News

Rahul Gandhi | ಪಾದಯಾತ್ರೆಗೆ ರಾಹುಲ್ ತಯಾರಿ, ಸ್ಥಾನ ತೊರೆಯುತ್ತಿರುವ ಹಿರಿಯರು

Rahul Gandhi

ರಾಹುಲ್ ಗಾಂಧಿ (Rahul Gandhi) ಅವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಪಾದ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಬಹುತೇಕರು ಮಗ್ನರಾಗಿದ್ದಾರೆ, ಮತ್ತೊಂದೆಡೆ ಮುಂದಿನ ತಿಂಗಳು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆಯ ಬಗ್ಗೆ ಸಿದ್ಧತೆಗಳು ನಡೆದಿವೆ. ಈಗಾಗಲೇ ಹೊರ ಬಿದ್ದಿರುವ ವರದಿಗಳ ಪ್ರಕಾರ, ರಾಹುಲ್ ಗಾಂಧಿ ಅವರೇನೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿಲ್ಲ. ಇದರ ಮಧ್ಯೆಯೇ ವಿವಿಧ ರಾಜ್ಯಗಳಲ್ಲಿ ಹಿರಿಯ ನಾಯಕರ ಮುನಿಸು ಇಡೀ ಕಾಂಗ್ರೆಸ್ ಹೊಗುತ್ತಿರುವ ದಿಕ್ಕಿನ ಬಗ್ಗೆ ಗೊಂದಲವನ್ನು ಸೃಷ್ಟಿಸಿದೆ.

ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಜಿ23 ನಾಯಕರು ಒಬ್ಬೊಬ್ಬರಾಗಿ ತಮಗೆ ವಹಿಸಿದ್ದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಗೆ ಹೊರಟಿದ್ದರೆ, ಇತ್ತ ಕಾಂಗ್ರೆಸ್ ವಿಘಟನೆಯ ಹಾದಿಯನ್ನು ಹಿಡಿಯುತ್ತಿರುವುದು ವಿಪರ್ಯಾಸವೇ ಸರಿ.

ರಾಜೀನಾಮೆ ನೀಡುತ್ತಿರುವ ನಾಯಕರು
ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸಂಚಾಲನಾ ಸಮಿತಿಗೆ ಹಿರಿಯ ನಾಯಕ ಆನಂದ್ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಪ್ರಮುಖ ನಿರ್ಧಾರ ಕೈಗೊಳ್ಳುವುದರಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನ ನೀಡುತ್ತಿಲ್ಲ ಎಂಬುದು ಅವರ ಆರೋಪ. ಇದೇ ರೀತಿಯಲ್ಲಿ ಕಾಶ್ಮೀರದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿರುವ ಗುಲಾಂ ನಬಿ ಆಜಾದ್ ಕೂಡ ತಮಗೆ ವಹಿಸಿದ್ದ ಎಲ್ಲ ಜವಾಬ್ದಾರಿಗಳಿಂದ ಮುಕ್ತರಾಗಿದ್ದಾರೆ. ಇವರದ್ದು ಅದೇ ತಕರಾರರು.

ರಾಜಸ್ಥಾನದಲ್ಲೂ ಮನೀಶ್ ತಿವಾರಿ ಕೂಡ ಇಂಥದ್ದೇ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಅಗ್ನಿಪಥ ವಿಷಯದಲ್ಲಿ ಅವರು ಸಂಪೂರ್ಣವಾಗಿ ಪಕ್ಷದ ನೀತಿಯ ವಿರುದ್ಧ ಮಾತನಾಡಿದ್ದರು. ಕೋರ್ಟು ವ್ಯಾಜ್ಯಗಳಲ್ಲಿ ಕಾಂಗ್ರೆಸ್ ಪರವಾಗಿ ವಾದ ಮಂಡಿಸುವ ಕಪಿಲ್ ಸಿಬಲ್ ಕೂಡ, ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ನಮಗಾರಿಗೂ ಮಾಹಿತಿ ಇರುವುದಿಲ್ಲ, ಸಲಹೆಗಳನ್ನು ಸ್ವೀಕರಿಸುವುದಿಲ್ಲ ಎಂಬುದು ಅವರ ಮಾತುಗಳೇನೂ ಗುಟ್ಟಾಗಿ ಉಳಿದಿಲ್ಲ. ಇದೇ ರೀತಿಯ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ ಪ್ರಾಬಲ್ಯವಿರುವ ಅನೇಕ ರಾಜ್ಯಗಳಲ್ಲಿವೆ. ಛತ್ತೀಸ್‌ಗಢ, ಕರ್ನಾಟಕ, ಹರಿಯಾಣ ಇತ್ಯಾದಿ ರಾಜ್ಯಗಳನ್ನು ಹೆಸರಿಸಬಹುದು. ಉನ್ನತ ನಾಯಕತ್ವದ ವಿರುದ್ಧ ಮುನಿಸು ತೋರಿಸುತ್ತಿರುವ ನಾಯಕರನ್ನು ಸಮಾಧಾನಗೊಳಿಸುವ ಕೆಲಸವನ್ನು ಮೊದಲಿಗೆ ರಾಹುಲ್ ಗಾಂಧಿ ಮಾಡಬೇಕಿದೆ.

ಯುವ ಕಾಂಗ್ರೆಸ್?
ಹಾಗೆ ನೋಡಿದರೆ, ಈಗ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನ ತೋರಿಸುತ್ತಿರುವವರೆಲ್ಲರೂ ಜಿ23ಯಲ್ಲಿ ಗುರುತಿಸಿಕೊಂಡವರು. ಕಾಂಗ್ರೆಸ್ ಉನ್ನತ ನಾಯಕತ್ವ ಬದಲಾಗಬೇಕೆಂದು ಇವರೆಲ್ಲರೂ ಪತ್ರ ಬರೆದವರು. ಈಗ ಉದ್ಭವಾಗಿರುವ ಸಮಸ್ಯೆ ಯಾವುದೇ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಯಂಗ್ ಲುಕ್ ನೀಡುವ ಪ್ರಯತ್ನವನ್ನೂ ಅಲ್ಲಗಳೆಯುವಂತಿಲ್ಲ. ಸಹಜವಾಗಿ ಹಳಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರಿದೆ. ಆದರೆ, ಈಗ ನಿರ್ಲಕ್ಷಕ್ಕೆ ಒಳಗಾಗಿರುವ ಹಿರಿಯರು 2004 ಮತ್ತು 2009ರಲ್ಲಿ ಕಾಂಗ್ರೆಸ್‌ ಯಶಸ್ಸಿಗೆ ಪ್ರಮುಖ ಕಾರಣಕರ್ತರೂ ಎಂಬುದು ಅಷ್ಟೇ ಸತ್ಯ.

ಯಾತ್ರೆಗೆ ಯಾಕಿಷ್ಟು ಮಹತ್ವ?
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವುದಕ್ಕಿಂತ ತಮ್ಮ ಇಮೇಜ್ ಅನ್ನು ಸೃಷ್ಟಿಸಿಕೊಳ್ಳುವ ತವಕದಲ್ಲಿದ್ದಾರೆ. ಇದಕ್ಕೆ ಭಾರತ್ ಜೋಡೋ ಯಾತ್ರೆ ಸಹಕರಿಸಲಿದೆ ಎಂಬುದು ಅವರ ಅಭಿಮತ. ಹಾಗಾಗಿಯೇ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3,500 ಕಿ.ಮೀ ಯಾತ್ರೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಈ ಪಾದಯಾತ್ರೆಗಳು ಸಾಕಷ್ಟು ಯಶಸ್ಸು ನೀಡಿವೆ. ಇದಕ್ಕೆ ವೈ ಎಸ್ ರಾಜಶೇಖರ್ ರೆಡ್ಡಿ, ಬಿಜೆಪಿಯ ಲಾಲ್ ಕೃಷ್ಣ ಆಡ್ವಾಣಿ, ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಕೈಗೊಂಡಿದ್ದ ಯಾತ್ರೆಗಳು ಕಣ್ಣ ಮುಂದಿವೆ.

ಹಿರಿಯರಿಂದ ಪಕ್ಷಕ್ಕೆ ನಷ್ಟವೇ?
ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಈಗ ಹಿರಿಯ ನಾಯಕರಾಗಿರುವವರು ಪ್ರಯತ್ನಪಟ್ಟಿರುವುದು ಸುಳ್ಳೇನೂ ಅಲ್ಲ. ಆದರೆ, ಬಿಜೆಪಿಯ ಅಬ್ಬರದ ಮಧ್ಯೆ ಕಾಂಗ್ರೆಸ್ ಡಲ್ ಆಗಿದ್ದು, ಪಕ್ಷದತ್ತ ಯುವ ನಾಯಕರನ್ನು ಸೆಳೆಯುವ ಅಗತ್ಯವಿದೆ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಸತತ ಎರಡು ಲೋಕಸಭೆ ಚುನಾವಣೆಗಳಲ್ಲಿ ದಯನೀಯವಾಗಿ ಸೋತಿರುವ ಕಾಂಗ್ರೆಸ್ 2024ರ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಲು ಸಾಧ್ಯವಾಗದಿದ್ದರೂ ಕನಿಷ್ಠ 100ಕ್ಕೂ ಹೆಚ್ಚು ಸ್ಥಾನಗಳ್ನು ಗೆದ್ದುಕೊಳ್ಳುವ ಅನಿವಾರ್ಯತೆಯಂತೂ ಇದೆ.

ಇದನ್ನು ಓದಿ | Rajiv Gandhi | ಅಪ್ಪಾ, ಪ್ರತಿ ಕ್ಷಣ ನನ್ನೊಂದಿಗಿದ್ದೀರಿ, ತಂದೆಯ ಜನ್ಮದಿನದಂದು ರಾಹುಲ್‌ ಭಾವುಕ ನುಡಿ

Exit mobile version