Site icon Vistara News

‘ಲೋಕ ಸಮರ’ಕ್ಕೆ ರಾಹುಲ್‌ ಗಾಂಧಿ ರಣಕಹಳೆ; ಭಾರತ ಜೋಡೊ ನ್ಯಾಯ ಯಾತ್ರೆಗೆ ಚಾಲನೆ

Rahul Gandhi

Rahul Gandhi thinks MRP means Minimum Retail Price; Here Is The Video

ಇಂಫಾಲ: ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇಶದ ಎಲ್ಲ ಪಕ್ಷಗಳು ಇನ್ನಿಲ್ಲದ ರಣತಂತ್ರ ರೂಪಿಸುತ್ತಿರುವ ಮಧ್ಯೆಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಣಿಪುರದಲ್ಲಿ ಭಾರತ್‌ ಜೋಡೊ ನ್ಯಾಯ ಯಾತ್ರೆಗೆ (Bharat Jodo Nyay Yatra) ಚಾಲನೆ ನೀಡಿದ್ದಾರೆ. ಮಣಿಪುರದ ಇಂಫಾಲ್ ಸಮೀಪದ ತೌಬಲ್ ಜಿಲ್ಲೆಯಿಂದ ಈ ಯಾತ್ರೆಗೆ ಚಾಲನೆ ಸಿಕ್ಕಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್‌ನ ನೂರಾರು ನಾಯಕರು ರಾಹುಲ್‌ ಗಾಂಧಿ ಅವರ ಯಾತ್ರೆಗೆ ಶುಭ ಕೋರಿದರು.

ರಾಹುಲ್‌ ಗಾಂಧಿ ಅವರು ಈಗಾಗಲೇ ಮೊದಲ ಹಂತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೊ ಯಾತ್ರೆಯನ್ನು ಕೈಗೊಂಡಿದ್ದು, ಅಪಾರ ಜನಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅವರು ಎರಡನೇ ಹಂತದಲ್ಲಿ ಯಾತ್ರೆ ಕೈಗೊಂಡಿದ್ದು, ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದೇ ಹೇಳಲಾಗುತ್ತಿದೆ.

ಮೋದಿ ವಿರುದ್ಧ ವಾಗ್ದಾಳಿ

ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಮಣಿಪುರದಲ್ಲಿ ಹಿಂಸಾಚಾರ ನಡೆಯಿತು. ನೂರಾರು ಜನ ಪ್ರಾಣ ಕಳೆದುಕೊಂಡರು. ಆದರೂ, ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಬರಲಿಲ್ಲ, ಜನರ ನೋವು ಆಲಿಸಲಿಲ್ಲ. ಮಣಿಪುರವನ್ನು ಮೋದಿ ಅವರ ಭಾರತದಲ್ಲಿ ಇದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗೆ ಜನರ ನೋವು ಅರ್ಥವಾಗಲಿಲ್ಲ” ಎಂದು ಹೇಳಿದರು. “ಮಣಿಪುರದ ಜನರ ನೋವು ಆಲಿಸಲೆಂದೇ ಇಲ್ಲಿಂದ ಭಾರತ್‌ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ್ದೇನೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಪಸರಿಸುವ ದ್ವೇಷವನ್ನು ಅಳಿಸಿ ಹಾಕುವುದೇ ಯಾತ್ರೆಯ ಉದ್ದೇಶ” ಎಂದು ತಿಳಿಸಿದರು.

100 ಲೋಕಸಭೆ ಕ್ಷೇತ್ರಗಳಲ್ಲಿ ಯಾತ್ರೆ

ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಮಣಿಪುರದ ಜೊತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿಮೀ), ಅರುಣಾಚಲ ಪ್ರದೇಶ (55 ಕಿ.ಮೀ. ಒಂದು ದಿನ), ಮೇಘಾಲಯ (ಒಂದು ದಿನದಲ್ಲಿ ಐದು ಕಿಮೀ) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿಮೀ)ಗಳನ್ನು ಕವರ್ ಮಾಡಲಿದೆ.

ಇದನ್ನೂ ಓದಿ: Rahul Gandhi: ಬಜರಂಗ್‌ ಪೂನಿಯಾ ಜತೆ ರಾಹುಲ್‌ ಗಾಂಧಿ ಕುಸ್ತಿ; ಗೆದ್ದಿದ್ದು ಯಾರು?

ಬಳಿಕ ಭಾರತ್ ಜೋಡೋ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ. ಒಟ್ಟು100 ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಯಾತ್ರೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಕಾರ್ಯಕ್ರಮಕ್ಕೆ ಸಮಯದ ಮಿತಿಯನ್ನು ಹೇರಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸಮಯದಲ್ಲಿ ಸಂಚಾರವನ್ನು ಪರ್ಯಾಯ ಮಾರ್ಗಗಳಲ್ಲಿ ತಿರುಗಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಯಾತ್ರೆಯನ್ನು ಇಂಫಾಲ್‌ನಿಂದಲೇ ಶುರು ಮಾಡಲು ಮುಂದಾಗಿತ್ತು. ಆದರೆ, ಬಿಜೆಪಿ ನೇತೃತ್ವದ ಎನ್ ಬಿರೇನ್ ಸಿಂಗ್ ಸರ್ಕಾರವು ಕೇವಲ ಸಾವಿರ ಮಂದಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿತ್ತು. ಹಾಗಾಗಿ, ಆರಂಭಿಕ ಕಾರ್ಯಕ್ರಮವನ್ನು ತೌಬಲ್‌ಗೆ ಬದಲಾಯಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version