Site icon Vistara News

ರಾಹುಲ್ ಪ್ರಧಾನಿಯಾಗಬೇಕು, ಪ್ರಿಯಾಂಕಾ ಚುನಾವಣೆಗೆ ಸ್ಪರ್ಧಿಸಬೇಕು: ಇದು ಮಲ್ಲಿಕಾರ್ಜುನ ಖರ್ಗೆಯವರ ಆಸೆ

Mallikarjun Kharge

Rahul Gandhi My Choice For PM, Priyanka Should Have Contested: Mallikarjun Kharge

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಶನಿವಾರ (ಜೂನ್‌ 1) ಕೊನೆಯ ಹಂತದ ಮತದಾನ ನಡೆಯಲಿದೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಮುಗಿಯಲಿದ್ದು, ಜೂನ್‌ 4ರ ಫಲಿತಾಂಶದತ್ತ ಎಲ್ಲರ ಗಮನ ಇರಲಿದೆ. ಈಗಾಗಲೇ ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂಬುದಾಗಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ ಗೆಲುವಿನ ವಿಶ್ವಾಸದಲ್ಲಿದೆ. ಇದರ ಬೆನ್ನಲ್ಲೇ, “ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು. ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು” ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಮಾತನಾಡಿದ್ದಾರೆ. “ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬೇಕು ಎಂದರೆ ನನ್ನ ಆಯ್ಕೆ ರಾಹುಲ್‌ ಗಾಂಧಿ. ದೇಶದ ಯುವಕ-ಯುವತಿಯರು, ದೇಶದ ಶಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ. ಹಾಗಾಗಿ, ರಾಹುಲ್‌ ಗಾಂಧಿ ಅವರೇ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿದೆ” ಎಂದು ಅವರು ಹೇಳಿದ್ದಾರೆ. ಇನ್ನು ಪ್ರಿಯಾಂಕಾ ವಾದ್ರಾ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, “ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಚುನಾವಣೆ ಪ್ರಚಾರಕ್ಕೆ ರಾಹುಲ್‌ ಗಾಂಧಿ ಅವರಿಗೆ ಸಾಥ್‌ ನೀಡಲು ಅವರು ಸ್ಪರ್ಧಿಸಲಿಲ್ಲ” ಎಂದು ಸ್ಪಷ್ಟಪಡಿಸಿದರು.

Mallikarjun Kharge

ಇಂಡಿಯಾ ಕೂಟ ಗೆದ್ದರೆ ಯಾರು ಪ್ರಧಾನಿ?

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿದರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ಕುರಿತು ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. “ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳು ಒಗ್ಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿವೆ. ಇನ್ನೂ ಕೆಲವು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿವೆ. ಆದರೆ, ಚುನಾವಣೆ ಫಲಿತಾಂಶದ ಬಳಿಕ ಎಲ್ಲ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವ, ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಫಲಿತಾಂಶದ ಬಳಿಕವೇ ಇದೆಲ್ಲ ನಿರ್ಧಾರವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ನೀವೇ ಪ್ರಧಾನಿ ಆಗ್ತೀರಾ ಎಂದಿದ್ದಕ್ಕೆ ಖರ್ಗೆ ಪ್ರತಿಕ್ರಿಯೆ

“ಇಂಡಿಯಾ ಒಕ್ಕೂಟ ಗೆದ್ದರೆ ನೀವೇ ಪ್ರಧಾನಿಯಾಗುತ್ತೀರಾ” ಎಂಬ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. “ಪ್ರಧಾನಿ ಹುದ್ದೆಗೆ ನನ್ನನ್ನು ನಾನೇ ಹೇಗೆ ಪ್ರಸ್ತಾಪ ಮಾಡಿಕೊಳ್ಳಲು ಆಗುತ್ತದೆ? ಪಕ್ಷವು ಈ ಕುರಿತು ತೀರ್ಮಾನ ಮಾಡುತ್ತದೆ. ಮೈತ್ರಿಕೂಟದ ಪಕ್ಷಗಳು ಈ ಕುರಿತು ನಿರ್ಧಾರ ಮಾಡುತ್ತವೆ. ಎಲ್ಲರೂ ಕುಳಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 2004 ಅಥವಾ 2009ರಲ್ಲಿ ಪ್ರಧಾನಿ ಆಯ್ಕೆಗೆ ಯಾವ ಪ್ರಕ್ರಿಯೆ ಅನುಸರಿಸಲಾಗಿತ್ತೋ, ಅದನ್ನೇ ಅನುಸರಿಸಲಾಗುತ್ತದೆ” ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Exit mobile version