ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ರಾಯ್‌ಬರೇಲಿ (Rae Bareli) ಸಂಸದರಾಗಿಯೇ ಮುಂದುವರಿಯಲು ತೀರ್ಮಾನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ರಾಯ್‌ಬರೇಲಿ ಹಾಗೂ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ತಾಯಿ ಸೋನಿಯಾ ಗಾಂಧಿ ಅವರು ಇದಕ್ಕೂ ಮೊದಲು ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದ ಸಂಸದರಾಗಿ ಉಳಿಯಲು ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ, ವಯನಾಡಿನ ಜನತೆಗೆ ರಾಹುಲ್ ಗಾಂಧಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ.
“ನಾನು ಪ್ರತಿ ದಿನವೂ ಬೈಗುಳ, ನಿಂದನೆಯನ್ನೇ ಕೇಳುತ್ತಿರುವುದರ ಮಧ್ಯೆ ನೀವು ನನಗೆ ನಿಸ್ಪೃಹವಾದ ಪ್ರೀತಿ ನೀಡಿದಿರಿ. ನಿಮ್ಮ ಪ್ರೀತಿಯೇ ನನ್ನನ್ನು ಎಲ್ಲದರಿಂದಲೂ ಕಾಪಾಡಿತು. ನೀವೇ ನನ್ನ ಮನೆ, ನೀವೇ ನನ್ನ ಕುಟುಂಬ ಆಗಿದ್ದಿರಿ. ನೀವು ಒಂದು ಕ್ಷಣವೂ ನನ್ನನ್ನು ಅವಮಾನಿಸಲಿಲ್ಲ. ನೀವು ನನ್ನನ್ನು ನಂಬುತ್ತ ಹೋದಂತೆ ನಾನು ಮತ್ತಷ್ಟು ಗಟ್ಟಿಯಾಗುತ್ತ ಹೋದೆ. ನಿಮ್ಮ ಪ್ರೀತಿಯೇ ನನ್ನನ್ನು ಅನುದಿನವೂ ಮುನ್ನಡೆಸಿತು, ಅನುದಿನವೂ ನನಗೆ ಮಾರ್ಗದರ್ಶನ ನೀಡಿತು, ಪ್ರತಿದಿನವೂ ನನಗೆ ಹೊಸ ಹುಮ್ಮಸ್ಸು ನೀಡಿತು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"Dear sisters and brothers of Wayanad,
— Congress (@INCIndia) June 23, 2024
The first time I visited you I came asking for your support. I was a stranger to you and yet you believed in me.
It was truly a joy and an honour to be your voice in Parliament."
Shri @RahulGandhi pens emotional letter to the people of… pic.twitter.com/6bkDLAN1Sz
ಧನ್ಯವಾದ ಹೇಳಲು ಮಾತೇ ಬಾರದು
“ನೀವು ಯಾವ ಧರ್ಮದವರೋ ನನಗೆ ಗೊತ್ತಿಲ್ಲ, ನಿಮ್ಮ ಸಮುದಾಯ ಯಾವುದು ಎಂಬುದು ನನಗೆ ಬೇಕಾಗಿಲ್ಲ, ನೀವು ಆಡುವ ಭಾಷೆ ಯಾವುದು ಎಂಬುದು ಕೂಡ ನನಗೆ ನಗಣ್ಯ. ಆದರೆ, ನೀವು ತೋರಿದ ಪ್ರೀತಿ, ವಾತ್ಸಲ್ಯ, ನೀವು ತುಂಬಿದ ಧೈರ್ಯ, ಪ್ರಾಂಜಲ ಮನಸ್ಸಿನಿಂದ ನೀವು ಹರಸಿದ ರೀತಿಗೆ ನನ್ನ ಮನಸ್ಸು ಉಕ್ಕಿಬಂದಿದೆ. ನಿಮಗೆ ಹೇಗೆ ಧನ್ಯವಾದ ಹೇಳುವುದೋ ತಿಳಿಯದು, ನಿಮ್ಮನ್ನು ಹೇಗೆ ಸಂತೈಸುವುದೋ ಗೊತ್ತಾಗದು. ಆದರೂ, ರಾಯ್‌ಬರೇಲಿಯಲ್ಲಿ ನನ್ನನ್ನು ಇಷ್ಟಪಡುವ ಜನ ಇದ್ದಾರೆ. ನಿಮ್ಮ ಪ್ರೀತಿಯೊಂದಿಗೆ ನಾನು ಅವರ ಬಳಿ ಹೋಗುತ್ತಿದ್ದೇನೆ. ನಿಮ್ಮ ನೆನಪುಗಳ ಬುತ್ತಿ ಕಟ್ಟಿಕೊಂಡು ಮುಂದಡಿ ಇಡುತ್ತಿದ್ದೇನೆ” ಎಂದು ರಾಹುಲ್ ಗಾಂಧಿ ಭಾವುಕರಾಗಿದ್ದಾರೆ.
“ವಯನಾಡಿನ ಹಿರಿಯರು, ಯುವಕರು, ಅಪಾರ ಶಕ್ತಿ ಹೊಂದಿರುವ ಯುವತಿಯರು ನನ್ನ ಶಕ್ತಿ ಆಗಿದ್ದರು. ವಯನಾಡಿನ ಜನರ ಪರವಾಗಿ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಲು ಇದೇ ಸ್ಫೂರ್ತಿಯಾಯಿತು. ಈಗ ವಯನಾಡಿನಲ್ಲಿ ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ನನಗೆ ನೀಡಿದ ಪ್ರೀತಿಯನ್ನೇ ಅವಳಿಗೆ ನೀಡುತ್ತೀರಿ ಎಂಬ ನಂಬಿಕೆ ಇದೆ. ಆ ಮೂಲಕ ದ್ವೇಷವನ್ನು ಹೊಡೆದೋಡಿಸಲು ಕೈ ಜೋಡಿಸುತ್ತೀರಿ ಎಂಬ ವಿಶ್ವಾಸವಿದೆ” ಎಂಬುದಾಗಿ ಅವರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಪಡೆದಿರುವ ಕಾರಣ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವಂತಾಗಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇವರಿಗೆ ಇದೇ ಮೊದಲ ಚುನಾವಣೆ ಆಗಿದೆ. ಚುನಾವಣೆಗೂ ಮೊದಲು, ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಿಂದ, ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.