ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂದು ಬೆಳಗ್ಗೆ ಟ್ವೀಟ್ ಮಾಡಿ, ಪಕ್ಷವನ್ನು ಬಿಟ್ಟು ಹೋದ ಐವರು ಪ್ರಮುಖ ನಾಯಕರ ಹೆಸರನ್ನು ಬರೆದು ಅದರಲ್ಲಿ ‘ಅದಾನಿ’ ಎಂಬ ಹೆಸರನ್ನು ಗುರುತಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi)ಯವರ ಈ ಟ್ವೀಟ್ಗೆ ತಿರುಗೇಟು ಕೊಟ್ಟ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿ ಪುತ್ರ, ಬಿಜೆಪಿ ನಾಯಕ ಅನಿಲ್ ಆ್ಯಂಟನಿ ‘ನೀವು ಮೊದಲು ಟ್ರೋಲರ್ಗಳಂತೆ ಮಾತಾಡುವುದನ್ನು ಬಿಡಿ, ಒಬ್ಬ ರಾಷ್ಟ್ರನಾಯಕನಂತೆ ಮಾತಾಡುವುದನ್ನು ಕಲಿಯಿರಿ’ ಎಂದಿದ್ದಾರೆ.
ಕಾಂಗ್ರೆಸ್ನಿಂದ ಕಳೆದ ಎರಡು-ಮೂರು ವರ್ಷಗಳಲ್ಲಿ ಹಲವು ನಾಯಕರು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಹಿಮಂತ್ ಬಿಸ್ವಾ ಶರ್ಮಾ 2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅದಾದ ಬಳಿಕ ಜ್ಯೋತಿರಾದಿತ್ಯ ಸಿಂಧಿಯಾ 2020ರಲ್ಲಿ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ತೊರೆದು, ಬಿಜೆಪಿಗೆ ಸೇರಿದ್ದರು. ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿದ್ದ ಗುಲಾಂ ನಬಿ ಆಜಾದ್ ಅವರು 2022ರಲ್ಲಿ ಪಕ್ಷ ತೊರೆದು ಹೋಗಿದ್ದರು. ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿದ್ದ, ಕಾಂಗ್ರೆಸ್ನ ಪ್ರಭಾವಿ ನಾಯಕ ಕಿರಣ್ಕುಮಾರ್ ರೆಡ್ಡಿ ಮತ್ತು ಕೇರಳದಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಇದೇ 2023ರಲ್ಲಿ ಕಾಂಗ್ರೆಸ್ ತೊರೆದಿದ್ದಾರೆ. ಇದರಲ್ಲಿ ಗುಲಾಂ ನಬಿ ಆಜಾದ್ರನ್ನು ಬಿಟ್ಟರೆ ಉಳಿದವರೆಲ್ಲ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷ ಬಿಟ್ಟು ಹೋದ ಈ ಐದೂ ನಾಯಕರ ಹೆಸರನ್ನು ಇಟ್ಟುಕೊಂಡೇ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ‘Ggulamನಲ್ಲಿ a, Scindia-d, Kiran-a, Himanta ಹೆಸರಿನಿಂದ n ಮತ್ತು Anil ಹೆಸರಿನಿಂದ I ಅಕ್ಷರಗಳನ್ನು ತೆಗೆದುಕೊಂಡು adani (ಅದಾನಿ) ಎಂದು ಉಲ್ಲೇಖಿಸಲಾದ ಪೋಸ್ಟರ್ವೊಂದನ್ನು ಶೇರ್ ಮಾಡಿಕೊಂಡ ರಾಹುಲ್ ‘‘ಇವರೆಲ್ಲರೂ ಸತ್ಯವನ್ನು ಮರೆಮಾಚಲು ಇಷ್ಟಪಡುತ್ತಾರೆ. ಹೀಗಾಗಿಯೇ ಅವರು ಪ್ರತಿದಿನ ಒಂದಲ್ಲ ಒಂದು ಕಾರಣ ಇಟ್ಟುಕೊಂಡು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ಇಷ್ಟೆಲ್ಲದರ ಮಧ್ಯೆ, ‘ಅದಾನಿಯವರ ಬೇನಾಮಿ ಕಂಪನಿಗೆ ಸೇರಿದ 20 ಸಾವಿರ ಕೋಟಿ ರೂಪಾಯಿ ಯಾರಿಗೆ ಸೇರಿದ್ದು’? ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ’’ ಎಂದು ಟ್ವೀಟ್ ಮಾಡಿದ್ದರು.
ರಾಹುಲ್ ಗಾಂಧಿಯವರ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡ ಬಿಜೆಪಿ ನಾಯಕ ಅನಿಲ್ ಆ್ಯಂಟನಿ ‘ಕಾಂಗ್ರೆಸ್ನಂಥ ರಾಷ್ಟ್ರೀಯ ಪಕ್ಷಕ್ಕೆ ಒಂದು ಕಾಲದಲ್ಲಿ ಅಧ್ಯಕ್ಷನಾಗಿದ್ದವರು, ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಲ್ಪಟ್ಟ ನಿಮ್ಮಂಥ ನಾಯಕ ಈಗ ಆನ್ಲೈನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವವರಂತೆ ಆಡುವುದನ್ನು, ಮಾತನಾಡುವುದನ್ನು ನೋಡಿದರೆ ನಿಜಕ್ಕೂ ಖೇದವಾಗುತ್ತದೆ. ನೀವೊಬ್ಬ ರಾಷ್ಟ್ರನಾಯಕನಂತೆ ಮಾತಾಡುವುದನ್ನು ಕಲಿಯಿರಿ. ಅದಾನಿ ಎಂಬ ಹೆಸರನ್ನು ಸೃಷ್ಟಿಸುವುದಕ್ಕೋಸ್ಕರ ದೊಡ್ಡದೊಡ್ಡ ದಿಗ್ಗಜ ನಾಯಕರೊಂದಿಗೆ ನನ್ನ ಹೆಸರನ್ನೂ ನೀವು ಸೇರಿಸಿದ್ದನ್ನು ನೋಡಿ ನನಗೆ ತುಂಬ ಖುಷಿಯಾಯಿತು. ಇವರೆಲ್ಲರೂ ದೇಶ ಕಟ್ಟುವ ಕಾಯಕದಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡವರು. ಅವರು ಕಾಂಗ್ರೆಸ್ನಲ್ಲಿದ್ದರೆ ಕುಟುಂಬದ ಸೇವೆಯನ್ನು ಮಾತ್ರ ಮಾಡಿಕೊಂಡಿರಬೇಕು ಎಂದು ಅರ್ಥ ಮಾಡಿಕೊಂಡು, ದೇಶ ಮತ್ತು ಜನಸೇವೆಗಾಗಿಯೇ ಬಿಜೆಪಿಯನ್ನು ಸೇರಿದರು’ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಬಿಟ್ಟವರಲ್ಲಿ ಹೆಚ್ಚಿನವರು ರಾಹುಲ್ ಗಾಂಧಿಯವರೇ ಸರಿ ಇಲ್ಲ ಎನ್ನುತ್ತಿದ್ದಾರೆ. ಗುಲಾಂ ನಬಿ ಆಜಾದ್ ಅವರಂತೂ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ದೂರುಗಳ ಪಟ್ಟಿಯನ್ನೇ ಸಲ್ಲಿಸಿದ್ದರು. ಅಸ್ಸಾಂ ಮುಖ್ಯಮಂತ್ರಿಯಾಗಿರುವ ಹಿಮಂತ್ ಬಿಸ್ವಾ ಶರ್ಮಾ ಅವರಂತೂ ಬಿಜೆಪಿಗೆ ಸೇರಿದ ಮೇಲೆ ಅಲ್ಲಿನ ರೂಪುರೇಷೆಯನ್ನು ಬದಲಿಸುವ ಜತೆ, ಸ್ವತಃ ತಾವೂ ಒಬ್ಬ ಪ್ರಭಾವಿ ನಾಯಕನಾಗಿ ಬೆಳೆದುನಿಂತಿದ್ದಾರೆ. ಇವರಂತೂ ರಾಹುಲ್ ಗಾಂಧಿ ಒಬ್ಬ ನಾಯಕನೇ ಅಲ್ಲ ಎಂದು ಷರಾ ಬರೆದುಬಿಟ್ಟಿದ್ದಾರೆ. ಇತ್ತೀಚೆಗೆ ಪಕ್ಷ ತೊರೆದ ಕಿರಣ್ ಕುಮಾರ್ ರೆಡ್ಡಿ, ಅನಿಲ್ ಆ್ಯಂಟನಿ ಒಟ್ಟಾರೆ ಪಕ್ಷದ ನಾಯಕತ್ವ ಮತ್ತು ಬದಲಾದ ಸಿದ್ಧಾಂತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಂಧಿಯಾ ಅವರೂ ಕೂಡ ಪರೋಕ್ಷವಾಗಿ ರಾಹುಲ್ ಗಾಂಧಿಯನ್ನೇ ದೂರಿದ್ದರು.