ನವದೆಹಲಿ: ಹೊಸ ಪಾಸ್‌ಪೋರ್ಟ್‌ಗೆ (Passport) ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದಿಲ್ಲಿ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಭಾರತೀಯ ಜನತಾ ಪಾರ್ಟಿ(BJP) ನಾಯಕ ಸುಬ್ರಮಣಿಯನ್ ಸ್ವಾಮಿ (Subramanian swamy) ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಪರವಾಗಿ ಅವರ ವಕೀಲ ತರುನ್ನುಮ್ ಚೀಮಾ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರ ಮುಂದೆ ಮನವಿ ಸಲ್ಲಿಸಿದ್ದು, ಹೊಸದಾಗಿ ಪಾಸ್‌ಪೋರ್ಟ್‌ಗಾಗಿ ಎನ್‌ಒಸಿ ನೀಡುವಂತೆ ಕೇಳಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡುವಾಗ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ ಎಂಬುದನ್ನು ಕೋರ್ಟ್ ಇದೇ ವೇಳೆ ಗಮನಿಸಿದೆ. ಹಾಗಿದ್ದೂ, ರಾಹುಲ್ ಗಾಂಧಿ ಅವರ ಮನವಿಗೆ ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿಕ್ರಿಯಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದ್ದು, ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.
ಒಂದು ವೇಳೆ, ರಾಹುಲ್ ಗಾಂಧಿ ಅವರಿಗೆ ವಿದೇಶಕ್ಕೆ ಹೋಗಲು ಅನುಮತಿ ನೀಡಿದರೆ, ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತು ಸುಬ್ರಹ್ಮಣ್ಯಸ್ವಾಮಿ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೇ, ಸ್ಯಾಮ್ ಪಿತ್ರೋಡಾ ಕುರಿತು ಖಾಸಗಿ ದೂರು ನೀಡಿದ್ದರು. ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಸರೆಂಡರ್ ಮಾಡಿದ್ದರು. ಹಾಗಾಗಿ ಹೊಸದಾಗಿ ಪಾಸ್‌ಪೋರ್ಟ್‍ಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: Rahul Gandhi: ಮಾನಹಾನಿ ಕೇಸ್; ಶಿಕ್ಷೆಗೆ ತಡೆ ಕೋರಿ ಗುಜರಾತ್ ಹೈಕೋರ್ಟ್ ಮೊರೆ ಹೋದ ರಾಹುಲ್
2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷ ಗರಿಷ್ಠ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಪರಿಣಾಮ ಅವರು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡಿದ್ದರು. ಅವರು ಕೇರಳ ವಯನಾಡ ಲೋಕಸಭೆಯನ್ನು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.