Site icon Vistara News

Rahul Gandhi: ಮಣಿಪುರಕ್ಕೆ ಬನ್ನಿ, ಜನರತ್ತ ನೋಡಿ; ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಆಗ್ರಹ

Rahul Gandhi

Rahul Gandhi posts 5-minute-long video on Manipur visit, has a message for PM Narendra Modi

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮಣಿಪುರಕ್ಕೆ ಭೇಟಿ ನೀಡಿದ್ದು, ನಿರಾಶ್ರಿತರ ಕೇಂದ್ರದಲ್ಲಿರುವವರನ್ನು ಭೇಟಿಯಾಗಿದ್ದಾರೆ. ಹಿಂಸಾಪೀಡಿತ ಮಣಿಪುರದ (Manipur) ಸಂತ್ರಸ್ತರ ಜತೆ ಮಾತುಕತೆ ನಡೆಸಿರುವ ರಾಹುಲ್‌ ಗಾಂಧಿ ಅವರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೂ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿ ಎಂದು ಆಗ್ರಹಿಸಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡಿರುವುದು, ಅಲ್ಲಿನ ಜನರ ಜತೆ ಮಾತನಾಡಿರುವುದು, ನಿರಾಶ್ರಿತರ ಕೇಂದ್ರದಲ್ಲಿರುವವರ ಆತಂಕ, ಅವರು ನೋವು ಹಂಚಿಕೊಂಡಿರುವ 5 ನಿಮಿಷದ ವಿಡಿಯೊವನ್ನು ರಾಹುಲ್‌ ಗಾಂಧಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನರೇಂದ್ರ ಮೋದಿ ಅವರೇ, ಮಣಿಪುರಕ್ಕೆ ಬನ್ನಿ. ಇಲ್ಲಿನ ಜನರ ನೋವುಗಳನ್ನು ಆಲಿಸಿ ಹಾಗೂ ಶಾಂತಿ ಸ್ಥಾಪನೆಗೆ ಕರೆ ನೀಡಿ” ಎಂಬುದಾಗಿ ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ. “ಜನರ ಮನೆಗಳನ್ನು ಸುಡಲಾಗುತ್ತಿದೆ, ಅಮಾಯಕ ಜನರ ಪ್ರಾಣವು ಅಪಾಯದಲ್ಲಿದೆ. ಸಾವಿರಾರು ಜನ ನಿರಾಶ್ರಿತರ ಕೇಂದ್ರದಲ್ಲಿ ಕಾಲ ಕಳೆಯುವಂತಾಗಿದೆ” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಜನರು ಹೇಳಿಕೊಂಡ ಸಮಸ್ಯೆಗಳು ಯಾವವು?

ಒಂದೊಂದು ನಿರಾಶ್ರಿತರ ಕೇಂದ್ರದಲ್ಲೂ ಜನರು ಹಲವು ರೀತಿಯ ಸಮಸ್ಯೆಗಳನ್ನು ರಾಹುಲ್‌ ಗಾಂಧಿ ಎದುರು ಹೇಳಿಕೊಂಡಿದ್ದಾರೆ. ಜಿರಿಬಮ್‌ ನಿರಾಶ್ರಿತರ ಕೇಂದ್ರದಲ್ಲಿ ಮಹಿಳೆಯೊಬ್ಬರು ರಾಹುಲ್‌ ಗಾಂಧಿ ಬಳಿ ಅಳಲು ತೋಡಿಕೊಂಡರು. “ನಮ್ಮ ಅಜ್ಜಿಯು ಇನ್ನೂ ಹಿಂಸಾಪೀಡಿತ ಪ್ರದೇಶದಲ್ಲಿಯೇ ಸಿಲುಕಿಕೊಂಡಿದ್ದಾರೆ. ನಾವು ಅಲ್ಲಿಗೆ ಹೋಗಲು ಆಗುತ್ತಿಲ್ಲ, ಆಕೆಯನ್ನೇ ಇಲ್ಲಿಗೆ ಕರೆಸಿಕೊಳ್ಳಲು ಆಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ಅಸ್ಸಾಂನ ಥಲಾಯಿ ಎಂಬಲ್ಲಿರುವ ನಿರಾಶ್ರಿತರ ಕೇಂದ್ರಕ್ಕೂ ರಾಹುಲ್‌ ಗಾಂಧಿ ಭೇಟಿ ನೀಡಿದ್ದಾರೆ. ಮಹಿಳೆಯೊಬ್ಬರು ಅಳಲು ತೋಡಿಕೊಳ್ಳುತ್ತ, “ವೈದ್ಯಕೀಯ ನಿರ್ಲಕ್ಷ್ಯದಿಂದ ನಾನು ನನ್ನ ಸಹೋದರನನ್ನು ಕಳೆದುಕೊಂಡೆ. ಸರ್ಕಾರದಿಂದ ಸಮರ್ಪಕವಾಗಿ ವೈದ್ಯಕೀಯ ಸೌಕರ್ಯಗಳು ಸಿಗುತ್ತಿಲ್ಲ” ಎಂದರು. ಆಗ ರಾಹುಲ್‌ ಗಾಂಧಿ ಅವರು, “ಶಿಬಿರಗಳಿಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಔಷಧಗಳನ್ನು ಪೂರೈಸುತ್ತಾರೆ” ಎಂದು ಭರವಸೆ ನೀಡಿದರು.

ಮಣಿಪುರದ ಚುರಾಚಂದ್‌ಪುರ ನಿರಾಶ್ರಿತರ ಶಿಬಿರದಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ, “ಸರ್ಕಾರವು ಬಿಕ್ಕಟ್ಟನ್ನು ಬಗೆಹರಿಸಲು ಮನಸ್ಸು ಮಾಡಿದರೆ, ಶೀಘ್ರದಲ್ಲೇ ಎಲ್ಲ ಸಮಸ್ಯೆ ಬಗೆಹರಿಯುತ್ತದೆ” ಎಂದು ತಿಳಿಸಿದರು. 2023ರ ಮೇ 3ರಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ಬಳಿಕ ಇದುವರೆಗೆ ರಾಹುಲ್‌ ಗಾಂಧಿ ಅವರು ಮೂರು ಬಾರಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Rahul Gandhi Controversy: ಹಿಂದೂಗಳು ಹಿಂಸಾವಾದಿ ಹೇಳಿಕೆ; ರಾಹುಲ್‌ ಗಾಂಧಿಗೆ ಶಂಕರಾಚಾರ್ಯರ ಬೆಂಬಲ

Exit mobile version