ತೆಲಂಗಾಣ: ಭಾರತ್ ಜೋಡೋ ಯಾತ್ರೆ ಮಧ್ಯೆ ರಾಹುಲ್ ಗಾಂಧಿ ಅವರು ಕೆಲವು ವಿಶೇಷ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದಾರೆ. ಮಾರ್ಗಮಧ್ಯೆ ಸಿಕ್ಕವರನ್ನು ಮಾತನಾಡಿಸುತ್ತ, ಡೋಲು ಬಾರಿಸಿ, ನೃತ್ಯ ಮಾಡುತ್ತ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಪ್ರಾರಂಭವಾದಾಗಿನಿಂದಲೂ ಅವರ ಅನೇಕ ವಿಡಿಯೊಗಳು ವೈರಲ್ ಆಗುತ್ತಿದ್ದು, ಅದರಲ್ಲೂ ಈಗ ವೈರಲ್ ಆದ ವಿಡಿಯೊ ಇನ್ನೂ ವಿಶೇಷವಾಗಿಯೇ ಇದೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ತೆಲಂಗಾಣಕ್ಕೆ ಕಾಲಿಟ್ಟು ಐದು ದಿನಗಳಾಯಿತು. ಇಂದು ಭಾನುವಾರ ಬೆಳಗ್ಗೆಯೇ ಗೊಲ್ಲಪಲ್ಲಿ ರಸ್ತೆಯಲ್ಲಿ ಶುರುವಾದ ಪಾದಯಾತ್ರೆಗೆ ಕೆಲವು ಮಕ್ಕಳೂ ಸೇರಿಕೊಂಡಿದ್ದರು. ಅವರು ರಾಹುಲ್ ಗಾಂಧಿಯವರೊಂದಿಗೆ ಮಾತನಾಡುತ್ತ ನಡೆಯುತ್ತಿದ್ದರು. ಅಷ್ಟೇ, ರೇಸ್ ಆಟ ಆಡೋಣ? ಎಂದು ರಾಹುಲ್ ಗಾಂಧಿ ಮಕ್ಕಳ ಬಳಿ ಕೇಳಿದರು. ಮಕ್ಕಳು ಒಕೆ ಅಂದಿದ್ದೇ ತಡ ರಾಹುಲ್ ಗಾಂಧಿ ಒಮ್ಮೆಲೇ ರೆಡಿ, ಸ್ಟೆಡಿ..ಗೋ..ಎನ್ನುತ್ತ ಓಡಿಯೇಬಿಟ್ಟರು. ಉಳಿದವರಿಗೆ ಏನಾಗುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ರಾಹುಲ್ ಗಾಂಧಿ ಓಡಿಯಾಗಿತ್ತು. ಬಳಿಕ ಅವರ ಹಿಂದೆಯೇ ಮಕ್ಕಳು, ಉಳಿದ ನಾಯಕರು, ಕಾರ್ಯಕರ್ತರು, ಕೊನೆಗೆ ಸೆಕ್ಯೂರಿಟಿ ಸಿಬ್ಬಂದಿ, ಪೊಲೀಸರೂ ಓಡತೊಡಗಿದರು. ಮಕ್ಕಳಂತೂ ಖುಷಿಯಲ್ಲಿ ಕೇಕೆ ಹಾಕುತ್ತಿದ್ದರು. ಇವರಲ್ಲಿ ಎಲ್ಲರಿಗಿಂತ ಮುಂದೆ ಓಡಿದ್ದು 52ವರ್ಷದ ರಾಹುಲ್ ಗಾಂಧಿ..! ಈ ವಿಡಿಯೊವನ್ನು ಕಾಂಗ್ರೆಸ್ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಹೀಗೆ ಓಡಿದ ಕೆಲವೇ ಹೊತ್ತಲ್ಲಿ, ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಇತರ ನಾಯಕರು ಕೋಲಾಟದಂಥ ನೃತ್ಯದಲ್ಲಿ ಪಾಲ್ಗೊಂಡರು. ಇವರು ಬರುವ ಮಾರ್ಗ ಮಧ್ಯೆ ಒಂದಷ್ಟು ಕಲಾವಿದೆಯರು ಸಾಂಪ್ರದಾಯಿಕ ಹಾಡು ಹೇಳುತ್ತ, ನೃತ್ಯ ಮಾಡುತ್ತಿದ್ದರು. ಇವರೂ ಸಹ ಅಲ್ಲಿ ನೃತ್ಯ ಮಾಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆ ಈಗಾಗಲೇ ಕರ್ನಾಟಕ, ಕೇರಳದಲ್ಲಿ ಸಂಚರಿಸಿ, ತೆಲಂಗಾಣಕ್ಕೆ ಕಾಲಿಟ್ಟಿದೆ. ಒಟ್ಟು 11 ದಿನ ಯಾತ್ರೆ ಇಲ್ಲಿರಲಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ತೆರಳಲಿದೆ.