ನವದೆಹಲಿ: ಭಾರತ್ ಜೋಡೋ (Bharat Jodo Yatra) ಯಾತ್ರೆಯಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಇಂದೋರ್‌ಗೆ ಆಗಮಿಸುತ್ತಿದ್ದಂತೆ ಬಾಂಬ್ ಸ್ಫೋಟಿಸುವ ಬೆದರಿಕೆಯ ಪತ್ರ ಬರೆಯಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಸಾವರ್ಕರ್ ಅವರ ಬಗ್ಗೆ ಹೇಳಿದ ಹೇಳಿಕೆಯ ಪ್ರತೀಕಾರವಾಗಿ ಈ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಂಬ್ ಸ್ಫೋಟಿಸಿ ರಾಹುಲ್ ಗಾಂಧಿಯನ್ನು ಸಾಯಿಸುತ್ತೇವೆ ಎಂಬ ಒಕ್ಕಣಿಕೆಯುಳ್ಳ ಪತ್ರವನ್ನು ರವಾನಿಸಲಾಗಿದೆ. ಮಧ್ಯಪ್ರದೇಶದ ಪೊಲೀಸರು ಈ ಕುರಿತು ಗಂಭೀರವಾಗಿ ತನಿಖೆ ಕೈಗೊಂಡಿದ್ದು, ಪತ್ರ ಬರೆದವರನ್ನು ಶೋಧಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಇಂದೋರ್ ನಗರದ ಜುನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಿಠಾಯಿ ಅಂಗಡಿಯೊಂದರ ಬಳಿ ಅಪರಿಚತರೊಬ್ಬರು ಬಾಂಬ್ ಬೆದರಿಕೆಯ ಪತ್ರವನ್ನು ಬಿಟ್ಟು ಹೋಗಿದ್ದು, ಅದರಲ್ಲಿ ಇಂದೋರ್‌ಗೆ ಭಾರತ್ ಜೋಡೋ ಯಾತ್ರೆ ಬರುತ್ತಿದ್ದಂತೆ ರಾಹುಲ್ ಗಾಂಧಿ ಅವರನ್ನು ಬಾಂಬ್ ಸ್ಫೋಟಿಸಿ ಕೊಲ್ಲಲಾಗುವುದು ಎಂದು ಬರೆಯಲಾಗಿದೆ.
ಇಂದೋರ್ ಪೊಲೀಸ್ ಮತ್ತು ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು, ಪತ್ರವನ್ನು ಬಿಟ್ಟು ಹೋದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಅಂಗಡಿ ಇರುವ ಜುನಿ ಪ್ರದೇಶದಲ್ಲಿರುವ ಎಲ್ಲ ಸಿಸಿಟಿವಿ ದೃಶ್ಯಾವಳಿಯನ್ನು ಪರೀಕ್ಷಿಸಲಾಗುತ್ತಿದೆ. ನವೆಂಬರ್ 24ರಂದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದೋರ್‌ನ ಖಾಲ್ಸಾ ಸ್ಟೇಡಿಯಂ ಪ್ರವೇಶಿಸಲಿದೆ.
ಇದನ್ನು ಓದಿ | Veer Savarkar | ರಾಹುಲ್ ಗಾಂಧಿ ವಿರುದ್ಧ ವೀರ ಸಾವರ್ಕರ್ ಮೊಮ್ಮಗ ಕೇಸ್, ಉದ್ಧವ್ ಠಾಕ್ರೆ ಕೂಡ ಆಕ್ಷೇಪ