ಲೇಹ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಲಡಾಕ್‌ಗೆ (Ladakh) ಭೇಟಿ ನೀಡಿದ್ದು, ಲಡಾಕ್‌ನಿಂದ ಪ್ಯಾಂಗಾಂಗ್ ಕೆರೆಗೆ (Pangong Lake) ಬೈಕ್ ರೈಡ್ ಮಾಡಿದ್ದಾರೆ. ಬೈಕ್ ರೈಡ್ ಮಾಡಿರುವ ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಫೋಟೊಗಳು ವೈರಲ್ ಆಗಿವೆ. ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಜನ್ಮದಿನದ ಹಿನ್ನೆಲೆಯಲ್ಲಿ ಅವರು ಬೈಕ್ ರೈಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ ಆಗಸ್ಟ್ 20ರಂದು ಇದೆ. ಅವರ ಜನ್ಮದಿನವನ್ನು ಆಚರಿಸಲು ರಾಹುಲ್ ಗಾಂಧಿ ಅವರು ಲಡಾಕ್‌ಗೆ ತೆರಳಿದ್ದು, ಅಲ್ಲಿ ಜನ್ಮದಿನ ಆಚರಿಸಲಿದ್ದಾರೆ. ಹಾಗೆಯೇ, “ಪ್ಯಾಂಗಾಂಗ್ ಕೆರೆಯು ವಿಶ್ವದಲ್ಲೇ ಅತಿ ಅದ್ಭುತ ಜಾಗ ಎಂದು ನನ್ನ ತಂದೆ ಹೇಳಿದ್ದರು. ಅಂತಹ ಅದ್ಭುತ ಜಾಗಕ್ಕೆ ಬೈಕ್ ರೈಡ್ ಹೋದೆ” ಎಂದು ರಾಹುಲ್ ಗಾಂಧಿ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಎರಡು ದಿನಗಳ ಭೇಟಿಗಾಗಿ ಲೇಹ್‌ಗೆ ತೆರಳಿದ್ದರು. ಆದರೆ, ಅದನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ. ಲೇಹ್‌ನಲ್ಲಿರುವ ಆಡಿಟೋರಿಯಂನಲ್ಲಿ ರಾಹುಲ್ ಗಾಂಧಿ ಅವರು ಶುಕ್ರವಾರ (ಆಗಸ್ಟ್ 18) 500 ಯುವಕರೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ಅನ್ನು ಕೇಂದ್ರಾಡಳಿತ ಎಂಬುದಾಗಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ಲಡಾಕ್‌ಗೆ ಭೇಟಿ ನೀಡಿದ್ದಾರೆ.
ಪ್ಯಾಂಗಾಂಗ್ ಕೆರೆಯಲ್ಲಿ ರಾಹುಲ್ ಗಾಂಧಿ ಪೂಜೆ
ಪ್ಯಾಂಗಾಂಗ್ ಕೆರೆಯ ತೀರದಲ್ಲಿ ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಜನ್ಮದಿನದ ಹಿನ್ನೆಲೆಯಲ್ಲಿ ಆಗಸ್ಟ್ 20ರಂದು ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗುವ ಜತೆಗೆ ಫುಟ್‌ಬಾಲ್ ಮ್ಯಾಚ್ ಕೂಡ ಆಡಿದ್ದಾರೆ. ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.