Site icon Vistara News

Rahul Gandhi: ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದ ರಾಹುಲ್; ಖರ್ಗೆ ಹೇಳಿದ್ದೇನು?

Rahul Gandhi Says, battle of ideology will continue

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶವು(Election Result 2023) ಕಾಂಗ್ರೆಸ್ ಪಕ್ಷದ (Congress Party) ಪಾಲಿಗೆ ಅಷ್ಟೇನೂ ಖುಷಿ ನೀಡಿಲ್ಲ. ತೆಲಂಗಾಣ (Telangana) ಹೊರತುಪಡಿಸಿದರೆ ರಾಜಸ್ಥಾನ(Rajasthan), ಛತ್ತೀಸ್‌ಗಢ (Chhattisgarh) ಮತ್ತು ಮಧ್ಯ ಪ್ರದೇಶದಲ್ಲಿ (Madhya Pradesh) ಸೋತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಸೋಲು ಒಪ್ಪಿಕೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಅಧಿಕಾರ ನೀಡಿರುವ ತೆಲಂಗಾಣದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸೋಲು ತಾತ್ಕಾಲಿಕ ಎಂದು ಹೇಳಿದ್ದಾರೆ.

ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಜನಾದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಆದರೆ, ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ತೆಲಂಗಾಣ ಪ್ರಜೆಗಳಿಗೆ ನೀಡಿರುವ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಅವರ ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಇದಕ್ಕೂ ಮೊದಲು ಮಧ್ಯ ಪ್ರದೇಶದ ಸೋಲಿನ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು, ನಾವು ಸೋಲನ್ನು ಸ್ವೀಕರಿಸುತ್ತೇವೆ. ಸೋಲಿಗೆ ಕಾರಣಗಳು ಏನು ಎಂದು ಕಂಡು ಹಿಡಿದು, ಕೊರತೆಗಳ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದು ಹೇಳಿದ್ದರು. ನಾವು ಲೋಪದೋಷಗಳನ್ನು ವಿಶ್ಲೇಷಿಸುತ್ತೇವೆ. ನಾವು ಪ್ರಸ್ತಾಪಿಸಿದ ವಿಷಯಗಳು ಮತದಾರರಿಗೆ ಏಕೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಗಳನ್ನು ಹುಡುಕುತ್ತೇವೆ. ನಾವು ಗೆಲ್ಲುವ ಅಥವಾ ಸೋತ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಲ್ಲದೇ, ಬಿಜೆಪಿಯ ಭಾರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ನಮ್ಮ ಪ್ರದರ್ಶನ ನಿರಾಸೆ ಮಾಡಿದೆ. ಆದರೆ ಸಂಕಲ್ಪ ಮಾಡಿದ್ದೇವೆ. ಈ ಮೂರು ರಾಜ್ಯಗಳಲ್ಲಿ ನಮ್ಮನ್ನು ಪುನರ್ನಿರ್ಮಿಸಲು ಮತ್ತು ಪುನರುಜ್ಜೀವನಗೊಳಿಸುವ ನಮ್ಮ ಕೆಲಸವನ್ನು ಮಾಡುತ್ತೇವೆ. ಇದೊಂದು ತಾತ್ಕಾಲಿಕ ಹಿನ್ನಡೆ. ನಾವು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಕಾರಣಗಳೇನು?

1.ಬುಡಕಟ್ಟು ಸಮುದಾಯದ ಒಲವು
ಮುಖ್ಯವಾಗಿ, ಮೋದಿ ಸರ್ಕಾರ ಬುಡಕಟ್ಟು ಸಮುದಾಯದ (Scheduled Tribe) ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳೇ ಅವರ ಒಲವು ಗಳಿಸಲು ನೆರವಾಗಿವೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ (ನ.15ರಂದು) ಪ್ರಧಾನಿ ಮೋದಿ, ʼವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳʼ (particularly vulnerable tribal groups – PVTG) ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮವೊಂದನ್ನು ಘೋಷಿಸಿದ್ದರು. ಈ ಯೋಜನೆಯು 24,000 ಕೋಟಿ ರೂ. ವೆಚ್ಚದಲ್ಲಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳವರಿಗೆ ತಲುಪುವಂಥ ರಸ್ತೆ, ಟೆಲಿಕಾಂ ಸಂಪರ್ಕ, ಶಿಕ್ಷಣ, ಆರೋಗಹ್ಯ ಸೇವೆ, ಪೌಷ್ಟಿಕತೆಯ ಮತ್ತಿತ ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಇದನ್ನು ಅವರು ಬುಡಕಟ್ಟು ಸಮುದಾಯಗಳ ನಾಯಕರಾದ ಬಿರ್ಸಾ- ಮುಂಡಾ ಜನ್ಮಸ್ಥಾನವಾದ ಜಾರ್ಖಂಡ್‌ನ ಉಲಿಹಾಟುವಿನಲ್ಲಿ ಉದ್ಘಾಟಿಸಲಿದ್ದಾರೆ. ಇದು ಹಾಗೂ ಇಂಥ ಹಲವಾರು ಯೋಜನೆಗಳು ಕೇಂದ್ರ ಸರ್ಕಾರದ ಬುಟ್ಟಿಯಲ್ಲಿದ್ದು, ಈ ಬಾರಿ ಅದು ವಿಶೇಷವಾಗಿ ಗುಡ್ಡಗಾಡು ಹಾಗೂ ಬುಡಕಟ್ಟು ಸಮುದಾಯಗಳ ಮತಗಳನ್ನು ಗುರಿಯಾಗಿಸಿಕೊಂಡಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 47 ಸೀಟುಗಳಲ್ಲಿ 31ನ್ನು ಗೆದ್ದುಕೊಂಡಿತ್ತು. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನಗಳಲ್ಲಿ ಈ ಗೆಲುವಿನ ಹೆಚ್ಚಿನ ಪ್ರಮಾಣ ಬಂದಿತ್ತು. ಛತ್ತೀಸ್‌ಗಢದಲ್ಲಿ 11 ಲೋಕಸಭೆ ಸ್ಥಾನಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ 11ರಲ್ಲಿ 9ನ್ನು ಬಿಜೆಪಿ ಗೆದ್ದುಕೊಂಡಿತ್ತು. ಬುಡಕಟ್ಟು ಸಮುದಾಯಗಳ ಹೃದಯ ಗೆದ್ದಿರುವ ಬಿಜೆಪಿ, ಅದನ್ನು ಉಳಿಸಿಕೊಂಡಿದೆ ಎಂದು ತರ್ಕಿಸಬಹುದು.

2.ಹಗರಣ, ಆಡಳಿತ ವಿರೋಧಿ ಅಲೆ?
ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಆಡಳಿತದ ಬಗ್ಗೆ ಛತ್ತೀಸ್‌ಗಢದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ವಿಶ್ಲೇಷಕರು ತರ್ಕಿಸಿದ್ದಾರೆ. ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರಣಿ ಹಗರಣಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತಲೇ ಬಂದಿತ್ತು. ಬಹುಕೋಟಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣ ಮುಖ್ಯವಾದುದು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಬಲ ನೀಡಲು ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಉಚಿತ ಧಾನ್ಯಗಳ ಯೋಜನೆಯಲ್ಲಿ 5,000 ಕೋಟಿ ರೂಪಾಯಿಗಳ ಹಗರಣವಾಗಿದೆ.

3.ಮೋದಿ ಕಿ ಗ್ಯಾರಂಟಿ
ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ, ಛತ್ತೀಸ್‌ಗಢದಲ್ಲೂ ಇತರ ರಾಜ್ಯಗಳಂತೆ ಹಲವು ಗ್ಯಾರಂಟಿಗಳ ಭರವಸೆಯನ್ನು ಮತದಾರರಿಗೆ ನೀಡಿತ್ತು. ʼಮೋದಿ ಕಿ ಗ್ಯಾರಂಟಿʼ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಮನೆಮನೆಗೆ ₹500ಗೆ ಎಲ್‌ಪಿಜಿ ಸಿಲಿಂಡರ್‌ಗಳು, ಎರಡು ವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗಗಳು, ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು, ಭೂರಹಿತ ಕೃಷಿ ಕಾರ್ಮಿಕರಿಗೆ ₹10,000 ವಾರ್ಷಿಕ ನೆರವು, ಪ್ರತಿ ಕ್ವಿಂಟಾಲ್‌ಗೆ ₹3,100 ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿತ್ತು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version