ಕಥುವಾ: ಭಾರತ್ ಜೋಡೋ ಯಾತ್ರೆ ಗುರುವಾರ ಜಮ್ಮು-ಕಾಶ್ಮೀರಕ್ಕೆ ಕಾಲಿಟ್ಟಿದೆ. ಥರಗುಡುವ ಚಳಿಯಲ್ಲಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಕಾಲಿಟ್ಟ ಬೆನ್ನಲ್ಲೇ ರಾಹುಲ್ ಗಾಂಧಿಯವರ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಈ ಮಧ್ಯೆ ಇನ್ನೊಂದು ವಿಚಾರಕ್ಕೆ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ. ಇಷ್ಟು ದಿನ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ಅಲ್ಲೆಲ್ಲ ಎಷ್ಟೇ ಚಳಿಯಿದ್ದರೂ ಬರಿ ಟಿ ಶರ್ಟ್ ಧರಿಸಿ ನಡೆದಿದ್ದರು. ಪಂಜಾಬ್, ಹರಿಯಾಣಗಳಲ್ಲಿ ರಕ್ತ ಹೆಪ್ಪುಗಟ್ಟುವಷ್ಟು ಚಳಿಯಿದ್ದಾಗಲೂ ರಾಹುಲ್ ಗಾಂಧಿ ಜಾಕೆಟ್ ಆಗಲೀ, ಸ್ವೆಟರ್ ಆಗಲೀ ಧರಿಸಿರಲಿಲ್ಲ. ಇದೊಂದು ದೊಡ್ಡ ಚರ್ಚಾ ವಿಷಯವೇ ಆಗಿತ್ತು. ಮಾಧ್ಯಮದವರೂ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ ‘ಈ ದೇಶದಲ್ಲಿ ಅದೆಷ್ಟೋ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗದವರು, ರೈತರು ಮಳೆ, ಚಳಿ, ಬಿಸಿಲಲ್ಲಿ ಪರದಾಡುತ್ತಿದ್ದಾರೆ. ಅವರ ಬಳಿ ಮಾಧ್ಯಮದವರು ಹೋಗುವುದಿಲ್ಲ, ನೀವ್ಯಾಕೆ ಸ್ವೆಟರ್, ಜಾಕೆಟ್ ಧರಿಸಿಲ್ಲ ಎಂದು ಪ್ರಶ್ನಿಸುವುದಿಲ್ಲ. ನಾನು ಈ ಭಾರತ್ ಜೋಡೋ ಯಾತ್ರೆಯಲ್ಲಿ ಅವರೆಲ್ಲರನ್ನೂ ಪ್ರತಿಬಿಂಬಿಸುತ್ತಿದ್ದೇನೆ. ತಡೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಚಳಿಯಾಗುವವರೆಗೂ ನಾನು ಜರ್ಕಿನ್ ಆಗಲೀ, ಜಾಕೆಟ್ ಆಗಲೀ ಹಾಕುವುದಿಲ್ಲ ಎಂದಿದ್ದರು. ಈ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತನ್ನಣ್ಣನಿಗೆ ಯಾಕೆ ಚಳಿಯಾಗುತ್ತಿಲ್ಲ ಎಂಬುದಕ್ಕೆ ಉತ್ತರ ಹೇಳಿದ್ದರು. ‘ನನ್ನ ಅಣ್ಣ ಸತ್ಯದ ಹೊದಿಕೆ ಹೊದ್ದಿದ್ದಾರೆ, ಹಾಗಾಗಿ ಅವರಿಗೆ ಚಳಿ ತಟ್ಟುವುದಿಲ್ಲ’ ಎಂದಿದ್ದರು.
ಅಂತೂ ಇಂದು ಭಾರತ್ ಜೋಡೋ ಯಾತ್ರೆಯ ಪಾದಯಾತ್ರೆ ಪ್ರಾರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಜಾಕೆಟ್ ಧರಿಸಿದ್ದಾರೆ. ಜಮ್ಮು-ಕಾಶ್ಮೀರದ ಕಥುವಾದಿಂದ ಇಂದು ಬೆಳಗ್ಗೆ 7ಗಂಟೆಯಿಂದ ಪಾದಯಾತ್ರೆ ಪ್ರಾರಂಭವಾಗಬೇಕಿತ್ತು. ಆದರೆ ಹವಾಮಾನ ತೀವ್ರ ಪ್ರತಿಕೂಲವಾಗಿತ್ತು. ದಾರಿ ಕಾಣದಷ್ಟು ಮಂಜು ಆವರಿಸಿದ್ದ ಕಾರಣ, ಕಾಲ್ನಡಿಗೆ ಸುಮಾರು 15-20 ನಿಮಿಷ ತಡವಾಯಿತು. ಆಗ ರಾಹುಲ್ ಗಾಂಧಿ ಸೇರಿ ಬಹುತೇಕ ಎಲ್ಲರೂ ಜಾಕೆಟ್ ಧರಿಸಿಯೇ ನಡೆಯುತ್ತಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿದೆ. ಆದರೆ ಕೆಲವು ಹೊತ್ತುಗಳ ಬಳಿಕ ಜಾಕೆಟ್ ಬಿಚ್ಚಿ, ನಡಿಗೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Bharat Jodo Yatra | ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ 21 ಪಕ್ಷಗಳಿಗೆ ಆಹ್ವಾನ, ಜೆಡಿಎಸ್‌ಗಿಲ್ಲ ಆಮಂತ್ರಣ