ನವದೆಹಲಿ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿರುವ, ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕೈಗೊಳ್ಳುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು (Bharat Jodo Nyay Yatra) ಐದು ದಿನಗಳವರೆಗೆ ಸ್ಥಗಿತಗೊಳಿಸಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ. “ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ (Cambridge University) ಉಪನ್ಯಾಸ, ಚುನಾವಣೆ ಸಭೆಗಳು ಇರುವ ಕಾರಣ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಐದು ದಿನಗಳ ವಿರಾಮ ನೀಡಲಾಗಿದೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆಗಳು, ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎರಡು ಉಪನ್ಯಾಸ ನೀಡುವ ಕಾರಣದಿಂದಾಗಿ ರಾಹುಲ್ ಗಾಂಧಿ ಅವರು ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಳ್ಳುವುದಿಲ್ಲ. ಮಾರ್ಚ್ 2ರಂದು ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಆರಂಭಿಸಲಿದ್ದು, ಮಾರ್ಚ್ 5ರಂದು ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ” ಎಂದು ಜೈರಾಮ್ ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
With the gathering of lakhs of people, Rahul Gandhi Ji resumed the Bharat Jodo Nyay Yatra from Unnao, Uttar Pradesh. pic.twitter.com/as1RMy6PR7
— Sama Ram Mohan Reddy (@RamMohanINC) February 21, 2024
ರಾಹುಲ್ ಗಾಂಧಿ ಅವರು ಮಣಿಪುರದಲ್ಲಿ ಜನವರಿ 14ರಂದು ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದು, ಬುಧವಾರಕ್ಕೆ (ಫೆಬ್ರವರಿ 21) ಯಾತ್ರೆಯು 39ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ, ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರು ಯಾತ್ರೆ ಕೈಗೊಳ್ಳುತ್ತಿದ್ದು, ಭಾರಿ ಪ್ರಮಾಣದಲ್ಲಿ ಜನಬೆಂಬಲವೂ ಸಿಗುತ್ತಿದೆ.
ಬಳಿಕ ಭಾರತ್ ಜೋಡೋ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ. ಒಟ್ಟು100 ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಯಾತ್ರೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Modi Caste: ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿಲ್ಲ! ರಾಹುಲ್ ಗಾಂಧಿ ಹೊಸ ಸಂಶೋಧನೆ!
ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಭಾರತ್ ಜೋಡೋ ನ್ಯಾಯ ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಮಣಿಪುರದ ಜತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿಮೀ), ಅರುಣಾಚಲ ಪ್ರದೇಶ (55 ಕಿ.ಮೀ. ಒಂದು ದಿನ), ಮೇಘಾಲಯ (ಒಂದು ದಿನದಲ್ಲಿ ಐದು ಕಿಮೀ) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿಮೀ)ಗಳನ್ನು ಕವರ್ ಮಾಡಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ