ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರ ಆರೋಗ್ಯ ವಿಚಾರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅನರ್ಹತೆ ರದ್ದಾದ ಬಳಿಕ ಮೊದಲ ಬಾರಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಅವರು ಬುಧವಾರ ಬೆಳಗ್ಗೆ (ಆಗಸ್ಟ್ 9) 10 ಜನಪಥದಿಂದ ಸಂಸತ್ತಿಗೆ ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಅವರು ಅಪಘಾತಕ್ಕೀಡಾದ ವ್ಯಕ್ತಿಯ ಆರೋಗ್ಯ ವಿಚಾರಿಸಿದರು. ಈ ವಿಡಿಯೊ ಈಗ ವೈರಲ್ ಆಗಿದೆ.
ಪಕ್ಕದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್‌ನಿಂದ ಬಿದ್ದಿದ್ದನ್ನು ಕಂಡ ರಾಹುಲ್ ಗಾಂಧಿ ಅವರು ತಮ್ಮ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಕಾರು ನಿಲ್ಲುತ್ತಲೇ ಅವರು ಅಪಘಾತಕ್ಕೀಡಾದ ವ್ಯಕ್ತಿಯ ಬಳಿ ಬಂದು ಅವರ ಆರೋಗ್ಯ ವಿಚಾರಿಸಿದರು. ಹಾಗೆಯೇ, ಸ್ಕೂಟಿಯನ್ನು ಎತ್ತಿ, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡ ಬಳಿಕವಷ್ಟೇ ರಾಹುಲ್ ಗಾಂಧಿ ಸಂಸತ್‌ಗೆ ತೆರಳಿದರು.
ವೈರಲ್ ಆದ ವಿಡಿಯೊ
ರಾಹುಲ್ ಗಾಂಧಿ ಅವರು ಮಾನವೀಯತೆ ಮೆರೆದ ವಿಡಿಯೊ ವೈರಲ್ ಆಗುತ್ತಲೇ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿ ಅವರು ನಿಜವಾಗಿಯೂ ಜನರ ನೋವುಗಳಿಗೆ ಸ್ಪಂದಿಸುವ ನಾಯಕ. ಇವರು ತೋರಿದ ಮಾನವೀಯತೆಯು ಪ್ರಾಂಜಲವಾಗಿದೆ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ರಾಹುಲ್ ಗಾಂಧಿ ಅವರನ್ನು ನೀವು ನೂರು ಕಾರಣಗಳಿಗಾಗಿ ಇಷ್ಟಪಡದಿರಬಹುದು. ಆದರೆ, ಅವರಲ್ಲಿರುವ ಕರುಣೆ, ದಯೆಯ ಮನಸ್ಥಿತಿಯನ್ನು ಅಲ್ಲಗಳೆಯಲು ಆಗದು” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rahul Gandhi: ಸಂಸತ್ತಲ್ಲಿ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ; ಸಂಸದೆಯರಿಂದ ದೂರು
ಅನರ್ಹತೆ ರದ್ದಾದ ಬಳಿಕ ಸಂಸತ್‌ನಲ್ಲಿ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಜನರ ಧ್ವನಿಯನ್ನು ಕಸಿಯಲಾಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನರೇಂದ್ರ ಮೋದಿ ಅವರು ಇದುವರೆಗೆ ಮಣಿಪುರಕ್ಕೆ ಭೇಟಿ ನೀಡಿಲ್ಲ. ಮಣಿಪುರ, ಹರಿಯಾಣ ಸೇರಿ ದೇಶಾದ್ಯಂತ ಬಿಜೆಪಿಯು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುತ್ತಿದೆ ಎಂದು ಟೀಕಿಸಿದರು.