ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯಕ್ಕೆ ಸೋಮವಾರ ಹಾಜರಾಗಲಿದ್ದಾರೆ.
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣಕಾಸು ವರ್ಗಾವಣೆ ಹಗರಣ ಕುರಿತು ರಾಹುಲ್ ಗಾಂಧಿ ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ಸೋನಿಯಾ ಗಾಂಧಿ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದುದರಿಂದ ಕಳೆದ ವಾರ ಇಡಿ ವಿಚಾರಣೆಯನ್ನು ಮುಂದೂಡಿತ್ತು. ಹೀಗಿದ್ದರೂ, ಮೂರು ದಿನಗಳಲ್ಲಿ 30 ಗಂಟೆಗಳ ವಿಚಾರಣೆ ನಡೆದಿದೆ.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ರಾಹುಲ್ ಗಾಂಧಿ ಅವರ ವ್ಯವಹಾರಗಳ ಬಗ್ಗೆ ಇ.ಡಿ ಪ್ರಶ್ನಿಸುವ ನಿರೀಕ್ಷೆ ಇದೆ. ಇದರಲ್ಲಿ 2010ರ ಡಿಸೆಂಬರ್ 13ರಿಂದ ಗಾಂಧಿ ನಿರ್ದೇಶಕರೂ ಆಗಿದ್ದಾರೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿರುವ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯ ಮಾಲೀಕತ್ವವನ್ನು ಹೊಂದಿದೆ. ಸಂಸದ ಸುಬ್ರಮಣಿಯನ್ ಸ್ವಾಮಿ ಅವರು 2013ರಲ್ಲಿ ದಾಖಲಿಸಿದ್ದ ದೂರಿನ ಮೇರೆಗೆ ಆದಾಯ ತೆರಿಗೆ ಇಲಾಖೆ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿತ್ತು. ಬಳಿಕ ಇಡಿ ವಿಚಾರಣೆಗೆ ಮುಂದಾಗಿತ್ತು.
ಕಳೆದ ಭಾನುವಾರ ರಾಹುಲ್ ಗಾಂಧಿ ಅವರು, ಅಗ್ನಿಪಥ್ ನೇಮಕಾತಿಗೆ ಸಂಬಂಧಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಇ ಡಿ ವಿಚಾರಣೆ ವೇಳೆ ಮೋತಿಲಾಲ್ ವೋರಾ ಹೆಸರು ಹೇಳಿದ ರಾಹುಲ್ ಗಾಂಧಿ; ಆಧಾರ ರಹಿತವೆಂದ ಪುತ್ರ