ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ, ಎರಡು ವರ್ಷ ಜೈಲಿಗೆ ಗುರಿಯಾಗಿದ್ದಲ್ಲದೆ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಅನ್ವಯ ಎರಡು ಅಥವಾ ಎರಡಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವವರು ತಕ್ಷಣವೇ ಅನರ್ಹರಾಗುತ್ತಾರೆ ಎಂಬ ನಿಯಮದ ಕಾರಣ ರಾಹುಲ್ ಗಾಂಧಿ ಅವರು ಅನರ್ಹಗೊಂಡಿದ್ದಾರೆ. ಆದರೆ, 2013ರಲ್ಲಿ ರಾಹುಲ್ ಗಾಂಧಿ ಅವರು ತಮ್ಮದೇ ಯುಪಿಎ ಸರ್ಕಾರ ಹೊರಡಿಸಿದ್ದ ಆರ್ಡಿನನ್ಸ್‌ನ ಪ್ರತಿಯನ್ನು ಹರಿಯದೆ ಹೋಗಿದ್ದರೆ, ಸುಗ್ರೀವಾಜ್ಞೆ ಜಾರಿಗೆ ಬೆಂಬಲ ನೀಡಿದ್ದಿದ್ದರೆ ಈಗ ಅವರು ಅನರ್ಹರಾಗುತ್ತಿರಲಿಲ್ಲ ಎಂಬುದು ಗಮನಾರ್ಹವಾಗಿದೆ.
ಏನಿದು ಸುಗ್ರೀವಾಜ್ಞೆ?
ಅದು 2013ನೇ ಇಸವಿ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (4) ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಶಾಸಕ ಅಥವಾ ಸಂಸದರಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಯಾದರೆ, ತಕ್ಷಣವೇ ಅವರು ಅನರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ, ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರಲು ಮುಂದಾಗಿತ್ತು. ಜನಪ್ರತಿನಿಧಿಯು ಶಿಕ್ಷೆಗೆ ಗುರಿಯಾದರೆ ತಕ್ಷಣವೇ ಅವರು ಅನರ್ಹರಾಗುವುದನ್ನು ಮೂರು ತಿಂಗಳು ತಡೆಯಲು ಸುಗ್ರೀವಾಜ್ಞೆ ತರಲಾಗಿತ್ತು.
ರಾಹುಲ್ ಗಾಂಧಿ ಮಾಡಿದ್ದೇನು?
2013ರ ಸೆಪ್ಟೆಂಬರ್ 28ರಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸುದ್ದಿಗೋಷ್ಠಿಗೆ ಆಗಮಿಸಿದ ರಾಹುಲ್ ಗಾಂಧಿ, ಸುಗ್ರೀವಾಜ್ಞೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಸರ್ಕಾರವು ಸುಗ್ರೀವಾಜ್ಞೆ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಇದು ರಾಜಕೀಯ ಪ್ರೇರಿತ ನಿರ್ಧಾರ. ಇಂತಹ ಅಪಸವ್ಯಗಳನ್ನು ನಿಲ್ಲಿಸುವ ಸಮಯ ಬಂದಿದೆ. ನಾವು ಭ್ರಷ್ಟಾಚಾರವನ್ನು ತಡೆಯಬೇಕೆಂದರೆ, ಇಂತಹ ರಾಜಿ ಮಾಡಿಕೊಳ್ಳಬಾರದು. ಇಂತಹ ಸುಗ್ರೀವಾಜ್ಞೆಯನ್ನು ಹರಿದು, ಬಿಸಾಡಬೇಕು” ಎಂದು ಹೇಳಿದರು. ಹಾಗೆಯೇ, ಸುಗ್ರೀವಾಜ್ಞೆ ಪ್ರತಿಯನ್ನು ಹರಿದುಹಾಕಿ, ಸುದ್ದಿಗೋಷ್ಠಿಯಿಂದ ಎದ್ದು ನಡೆದರು.
ಹಾಗೊಂದು ವೇಳೆ, ರಾಹುಲ್ ಗಾಂಧಿ ಅವರು 2013ರಲ್ಲಿ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದುಹಾಕದಿದ್ದರೆ, ಸುಗ್ರೀವಾಜ್ಞೆ ಜಾರಿಗೆ ಸಂಸತ್ತಿನಲ್ಲಿ ಬೆಂಬಲ ಸೂಚಿಸಿದ್ದರೆ, ಈಗ ಅವರು ಅನರ್ಹರಾಗುತ್ತಿರಲಿಲ್ಲ. ನ್ಯಾಯಾಲಯವು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದರೂ, ಅನರ್ಹರಾಗುವುದರಿಂದ ರಾಹುಲ್ ಗಾಂಧಿ ಮೂರು ತಿಂಗಳು ರಕ್ಷಣೆ ಪಡೆಯಬಹುದಿತ್ತು. ಅಷ್ಟರೊಳಗೆ ಮೇಲ್ಮನವಿ ಸಲ್ಲಿಸಿ, ಉನ್ನತ ನ್ಯಾಯಾಲಯಗಳಿಂದ ಶಿಕ್ಷೆಗೆ ತಡೆಯಾಜ್ಞೆ ತರಬಹುದಿತ್ತು. ತಡೆಯಾಜ್ಞೆ ತಂದು ಅವರು ಸಂಸದರಾಗಿ ಮುಂದುವರಿಯಬಹುದಿತ್ತು. ಆದರೆ, ತಮ್ಮದೇ ಸರ್ಕಾರದ ನಡೆಯನ್ನು ವಿರೋಧಿಸಿದ ರಾಹುಲ್ ಗಾಂಧಿ ಈಗ ತೀರ್ಪು ಬಂದು ಮರುದಿನವೇ ಅನರ್ಹರಾಗಿದ್ದಾರೆ.
ಇದನ್ನೂ ಓದಿ: Rahul Gandhi Disqualified: ‘ನಾನು ಎಲ್ಲದಕ್ಕೂ ಸಿದ್ಧ’, ಅನರ್ಹತೆ ಬಳಿಕ ರಾಹುಲ್ ಗಾಂಧಿ ಹೇಳಿದ್ದೇನು?